ಮುಂಬೈ: ಕಾಶ್ಮೀರದ ಪೆಹಲ್ಗಾಮ್ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಭುಗಿಲೆದ್ದಿರುವ ಸಂಘರ್ಷದ ಪರಿಣಾಮ ಭಾರತೀಯ ಷೇರುಮಾರುಕಟ್ಟೆ ಮೇಲೂ ಆಗಿದ್ದು, ಷೇರುಮಾರುಕಟ್ಟೆಯ ಉಭಯ ಸೂಚ್ಯಂಕಗಳು ರೆಡ್ ನಲ್ಲಿ ಅಂತ್ಯಗೊಂಡಿವೆ.
ವಾರದ ಅಂತಿಮ ದಿನವಾದ ಶುಕ್ರವಾರ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.74ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.86ರಷ್ಟು ಇಳಿಕೆ ದಾಖಲಿಸಿದೆ.
ಸೆನ್ಸೆಕ್ಸ್ ಇಂದು ಬರೊಬ್ಬರಿ 588.90 ಅಂಕಗಳ ಇಳಿಕೆಯೊಂದಿಗೆ 79,212.53 ಅಂಕಗಳಿಗೆ ಇಳಿಕೆಯಾಗಿದ್ದರೆ, ನಿಫ್ಟಿ 207.35 ಅಂಕಗಳ ಕುಸಿತದೊಂದಿಗೆ 24,039.35 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಕಾಶ್ಮೀರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಹೂಡಿಕೆದಾರರು ಇಂದು ಅತ್ಯಂತ ಎಚ್ಚರಿಕೆಯಿಂದ ವಹಿವಾಟು ನಡೆಸಿದ್ದು, ಬಹುತೇಕ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ನಿರಾಸಕ್ತಿ ತೋರಿಸಿದರು. ಇದು ಶುಕ್ರವಾರ ಭಾರತದ ಷೇರು ಮಾರುಕಟ್ಟೆಗಳು ತೀವ್ರ ಅಸ್ಥಿರತೆಯಿಂದ ಮುಕ್ತಾಯಗೊಳ್ಳಲು ಕಾರಣವಾಯಿತು.
ಹೂಡಿಕೆದಾರರ 9 ಲಕ್ಷ ಕೋಟಿ ನಷ್ಟ
ಇನ್ನು ಇಂದಿನ ವಹಿವಾಟಿನಲ್ಲಿ ಹೂಡಿಕೆದಾರರ ಬರೊಬ್ಬರಿ 9 ಲಕ್ಷ ಕೋಟಿ ರೂ ನಷ್ಟವಾಗಿದ್ದು, ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ವಹಿವಾಟಿನಲ್ಲಿ ಸುಮಾರು 430 ಲಕ್ಷ ಕೋಟಿರೂ ಗಳಿಂದ 421 ಲಕ್ಷ ಕೋಟಿರೂ ಗಳಿಗೆ ಇಳಿಕೆಯಾಗಿದೆ. ಒಂದು ಅವಧಿಯಲ್ಲಿ ಭಾರಿ ಪ್ರಮಾಣ ಪರಿಣಾಮ ಹೂಡಿಕೆದಾರರ ಸುಮಾರು 9 ಲಕ್ಷ ಕೋಟಿ ರೂಗಳಷ್ಟು ನಷ್ಟವಾಗಿದೆ.
ವೆಂಚುರಾ ಸಂಸ್ಥೆಯ ಸಂಶೋಧನಾ ಮುಖ್ಯಸ್ಥರಾದ ಇನಿಟ್ ಬೊಲಿಂಜ್ಕರ್ ಈ ಬಗ್ಗೆ ಮಾತನಾಡಿದ್ದು, ಸಿಂಧೂ ಜಲ ಒಪ್ಪಂದದಲ್ಲಿ ಯಾವುದೇ ಹಸ್ತಕ್ಷೇಪವನ್ನು "ಯುದ್ಧದ ಕ್ರಿಯೆ" ಎಂದು ಪರಿಗಣಿಸಲಾಗುತ್ತದೆ ಎಂಬ ಪಾಕಿಸ್ತಾನದ ಹೇಳಿಕೆಯು ಹೂಡಿಕೆದಾರರ ಕಳವಳಗಳನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ವಿಶೇಷವಾಗಿ ಪಹಲ್ಗಾಮ್ ಘಟನೆ ಮತ್ತು ಭಾರತದ ಪ್ರತಿಕ್ರಿಯೆಯ ನಂತರ ಎಂದು ಅಭಿಪ್ರಾಯಪಟ್ಟಿದ್ದಾರೆ.
"ದಾಳಿ, ಭಾರತದ ಪ್ರತೀಕಾರದ ಕ್ರಮಗಳು (ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವುದು ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಕೆಳಮಟ್ಟಕ್ಕಿಳಿಸುವುದು ಸೇರಿದಂತೆ) ಮತ್ತು ಪಾಕಿಸ್ತಾನದ ಪ್ರತಿಕ್ರಿಯೆಯಿಂದ ಉಂಟಾದ ದ್ವಿಪಕ್ಷೀಯ ಸಂಬಂಧಗಳಲ್ಲಿನ ಈ ತ್ವರಿತ ಕುಸಿತವು ವ್ಯಾಪಕವಾದ ಮಾರಾಟದ ಒತ್ತಡವನ್ನು ಹುಟ್ಟುಹಾಕಿದೆ. ಏಕೆಂದರೆ ದೊಡ್ಡ ಪ್ರಾದೇಶಿಕ ಸಂಘರ್ಷದ ಸಾಧ್ಯತೆಯು ಬೆಳೆಯುತ್ತಿರುವ ಆತಂಕವಾಗಿದೆ ಎಂದು ಹೇಳಿದ್ದಾರೆ.
ಮಿರಾ ಮನಿ ಕಂಪನಿಯ ಸಹ-ಸಂಸ್ಥಾಪಕ ಆನಂದ್ ಕೆ. ರಥಿ ಅವರೂ ಕೂಡ ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, 'ಇತ್ತೀಚಿನ ಬೆಳವಣಿಗೆಯಿಂದ ಅನೇಕ ಹೂಡಿಕೆದಾರರು ಲಾಭವನ್ನು ಕಾಯ್ದಿರಿಸಲು ಎದುರು ನೋಡುತ್ತಿದ್ದಾರೆ. ವಿಶೇಷವಾಗಿ ಜಾಗತಿಕ ಏರಿಳಿತದ ಹೊರತಾಗಿಯೂ ಭಾರತೀಯ ಮಾರುಕಟ್ಟೆಗಳು ಉತ್ತಮ ಪ್ರದರ್ಶನ ನೀಡಿರುವುದನ್ನು ಪರಿಗಣಿಸಿ ಪ್ರಸ್ತುತ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಮುಂದಾಗುತ್ತಿದ್ದಾರೆ. ಯಾರೂ ಯುದ್ಧವನ್ನು ಬಯಸದಿದ್ದರೂ, ಪರಿಸ್ಥಿತಿಯನ್ನು ಸುತ್ತುವರೆದಿರುವ ಅನಿಶ್ಚಿತತೆಯು ಸಂಭಾವ್ಯ ಸಂಘರ್ಷದ ಬಗ್ಗೆ ಚಿಂತೆಗಳನ್ನು ಹುಟ್ಟುಹಾಕುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ 'ಕಾರ್ಗಿಲ್ ಯುದ್ಧದ ಸಮಯದಲ್ಲಿ ಮಾರುಕಟ್ಟೆಗಳು ಅಲ್ಪಾವಧಿಯಲ್ಲಿ 15% ರಷ್ಟು ಕುಸಿದ ಐತಿಹಾಸಿಕ ಪೂರ್ವನಿದರ್ಶನಗಳಿವೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಹೂಡಿಕೆದಾರರು ಷೇರು ಮಾರುಕಟ್ಟೆಗಳಿಂದ ಹೊರಬರಲು ಹೇಗೆ ಕಾರಣವಾಗಬಹುದು ಎಂಬುದನ್ನು ಇದು ಎತ್ತಿ ತೋರಿಸುತ್ತವೆ. ನಾವು ಈಗ ಆ ಪ್ರಮಾಣದ ಕುಸಿತವನ್ನು ಅನುಭವಿಸುತ್ತಿಲ್ಲವಾದರೂ, ಹೆಚ್ಚುತ್ತಿರುವ ಉದ್ವಿಗ್ನತೆಗಳು ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ಹೊರಬರಲು ಅವಕಾಶವನ್ನು ಸೃಷ್ಟಿಸಿವೆ, ಇದು ಪ್ರಸ್ತುತ ಕುಸಿತಕ್ಕೆ ಕಾರಣವಾಗಿದೆ" ಎಂದು ರಥಿ ಅಭಿಪ್ರಾಯಪಟ್ಟಿದ್ದಾರೆ.