ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಲೋಕಸಭೆಯಲ್ಲಿ ಆದಾಯ ತೆರಿಗೆ ಮಸೂದೆ 2025 ಅನ್ನು ಹಿಂಪಡೆದುಕೊಂಡಿದ್ದಾರೆ ಮತ್ತು ಆಯ್ಕೆ ಸಮಿತಿ ಸೂಚಿಸಿದ ಬದಲಾವಣೆಗಳನ್ನು ಸೇರಿಸಿದ ನಂತರ ಮಸೂದೆಯ ಪರಿಷ್ಕೃತ ಆವೃತ್ತಿಯನ್ನು ಆಗಸ್ಟ್ 11 ರಂದು ಮಂಡಿಸಲಿದ್ದಾರೆ.
ಆದಾಯ ತೆರಿಗೆ ಮಸೂದೆಯ ಹೊಸ ಆವೃತ್ತಿಯನ್ನು ಆಗಸ್ಟ್ 11 ರಂದು ಲೋಕಸಭೆಯಲ್ಲಿ ಮಂಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಐ-ಟಿ ಮಸೂದೆಯ ನವೀಕರಿಸಿದ ಆವೃತ್ತಿಯು ಆಯ್ಕೆ ಸಮಿತಿಯ ಹೆಚ್ಚಿನ ಶಿಫಾರಸುಗಳನ್ನು ಒಳಗೊಂಡಿರುತ್ತದೆ.
"ಮಸೂದೆಯ ಹಲವು ಆವೃತ್ತಿಗಳಿಂದ ಗೊಂದಲವನ್ನು ತಪ್ಪಿಸಲು ಮತ್ತು ಎಲ್ಲಾ ಬದಲಾವಣೆಗಳೊಂದಿಗೆ ಸ್ಪಷ್ಟ ಮತ್ತು ಪರಿಷ್ಕೃತ ಆವೃತ್ತಿಯನ್ನು ಒದಗಿಸಲು, ಆದಾಯ ತೆರಿಗೆ ಮಸೂದೆಯ ಹೊಸ ಆವೃತ್ತಿಯನ್ನು ಸೋಮವಾರ ಸದನದ ಪರಿಗಣನೆಗೆ ಮಂಡಿಸಲಾಗುವುದು" ಎಂದು ಮೂಲಗಳು ತಿಳಿಸಿವೆ.
ಬೈಜಯಂತ್ ಪಾಂಡಾ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಫೆಬ್ರವರಿ 13 ರಂದು ಲೋಕಸಭೆಯಲ್ಲಿ ಮಂಡಿಸಲಾದ ಆದಾಯ ತೆರಿಗೆ ಮಸೂದೆಯಲ್ಲಿ ಹಲವಾರು ಬದಲಾವಣೆಗಳನ್ನು ಸೂಚಿಸಿತ್ತು.
ಕೆಳಮನೆಯಲ್ಲಿ ಪರಿಚಯಿಸಿದ ಕೂಡಲೇ, ಆರು ದಶಕಗಳಷ್ಟು ಹಳೆಯದಾದ ಆದಾಯ ತೆರಿಗೆ ಕಾಯ್ದೆ 1961 ಅನ್ನು ಬದಲಿಸುವ ಮಸೂದೆಯನ್ನು ಪರಿಶೀಲನೆಗಾಗಿ ಆಯ್ಕೆ ಸಮಿತಿಗೆ ಉಲ್ಲೇಖಿಸಲಾಗಿತ್ತು. 31 ಸದಸ್ಯರ ಆಯ್ಕೆ ಸಮಿತಿಯು ಮಸೂದೆಯ ಕುರಿತು ಕೆಲವು ಸಲಹೆಗಳನ್ನು ನೀಡಿದೆ.
ಹೊಸ ಕಾನೂನಿನಲ್ಲಿ ಧಾರ್ಮಿಕ ಮತ್ತು ದತ್ತಿ ಟ್ರಸ್ಟ್‌ಗಳಿಗೆ ನೀಡುವ ಅನಾಮಧೇಯ ದೇಣಿಗೆಗಳ ಮೇಲಿನ ತೆರಿಗೆ ವಿನಾಯಿತಿಯನ್ನು ಮುಂದುವರಿಸಲು ಅವರು ಒಲವು ತೋರಿದ್ದಾರೆ. ಅಲ್ಲದೆ ತೆರಿಗೆದಾರರು ಐಟಿಆರ್ ಸಲ್ಲಿಸುವ ಅಂತಿಮ ದಿನಾಂಕದ ನಂತರವೂ ಯಾವುದೇ ದಂಡ ಪಾವತಿಸದೆ ಟಿಡಿಎಸ್ ಮರುಪಾವತಿಯನ್ನು ಪಡೆಯಲು ಅನುಮತಿಸಬೇಕೆಂದು ಸೂಚಿಸಲಾಗಿದೆ.
ಈ ಹಿಂದೆ ಇದ್ದ ಆವೃತ್ತಿಯ ಮಸೂದೆಯಲ್ಲಿ ಹಲವು ಡ್ರಾಫ್ಟಿಂಗ್ ದೋಷಗಳಿರುವುದನ್ನು ವಕೀಲರು, ಚಾರ್ಟರ್ಡ್ ಅಕೌಂಟೆಂಟ್ಗಳು ಗುರುತಿಸಿದ್ದರು. ಲೋಸಕಭೆಯ ಆಯ್ಕೆ ಸಮಿತಿಯ ಗಮನಕ್ಕೆ ಈ ದೋಷಗಳನ್ನು ತರಲಾಗಿತ್ತು.