

ಬೆಂಗಳೂರು: ತಾವು ನಿರ್ದೇಶಿಸಿರುವ ನೂತನ ಚಿತ್ರ ಕೆಡಿ: ದ ಡೆವಿಲ್ ಚಿತ್ರದ ಹಾಡಿನ ಕುರಿತು ಉಂಟಾಗಿರುವ ವಿವಾದದ ಕುರಿತು ಕೊನೆಗೂ ನಿರ್ದೇಶಕ ಜೋಗಿ ಪ್ರೇಮ್ ಮೌನ ಮುರಿದಿದ್ದಾರೆ.
‘ಕೆಡಿ’ (KD) ಸಿನಿಮಾದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಭಾರಿ ವಿವಾದಕ್ಕೆ ಕಾರಣವಾಗಿದ್ದು, ಈ ಹಾಡಿನಲ್ಲಿ ಅಶ್ಲೀಲ ಸಾಹಿತ್ಯ ಇದೆ ಎಂಬ ಕಾರಣಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಉತ್ತರ ಭಾರತದಲ್ಲಿ ಈ ಚಿತ್ರದ ಹಿಂದಿ ಅವತರಣಿಕೆಯ ಹಾಡಿಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಹಿಂದಿ ಆವೃತ್ತಿಯ ಹಾಡನ್ನು ನಿರ್ಬಂಧಿಸಲಾಗಿದೆ.
ಈ ಹಾಡಿನಲ್ಲಿ ಕಾಣಿಸಿಕೊಂಡಿರುವ ನಟಿ ನೋರಾ ಫತೇಹಿ ಮತ್ತು ಹಿಂದಿ ಸಾಹಿತಿ ರಕೀಬ್ ಆಲಂ ವಿರುದ್ಧವೂ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಇಬ್ಬರೂ ನಿರ್ದೇಶಕ ಜೋಗಿ ಪ್ರೇಮ್ ರತ್ತ ಬೊಟ್ಟು ಮಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರ ಕೂಡ ಈ ಹಾಡಿನ ಕುರಿತು ಪ್ರತಿಕ್ರಿಯಿಸಿ ಸೆನ್ಸಾರ್ ಮಂಡಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ ಎನ್ನಲಾಗಿದೆ.
ಇಷ್ಟೆಲ್ಲಾ ಬೆಳವಣಿಗೆಗಳ ಬಳಿಕ ಕೊನೆಗೂ ನಿರ್ದೇಶಕ ಪ್ರೇಮ್ ಈ ಕುರಿತು ಸ್ಪಷ್ಟನೆ ನೀಡಿದ್ದು, ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
'ಅಶ್ಲೀಲ ಅಲ್ಲ..'
'ಯಾರಿಗೂ ನೋವು ಮಾಡುವ ಉದ್ದೇಶದಿಂದ ಈ ಹಾಡು ಬರೆದಿಲ್ಲ.. ಈ ಹಿಂದೆ ನಾನು ತಾಯಿ ಬಗ್ಗೆ, ದೇವರ ಬಗ್ಗೆ, ಪ್ರೀತಿ ಮತ್ತು ಸಹೋದರರ ಬಗ್ಗೆ ಹಾಡು ಬರೆದಿದ್ದೇನೆ. ನನ್ನ ಹಾಡುಗಳಿಗೆ ತುಂಬಾ ಪ್ರೀತಿ ಮತ್ತು ಪ್ರೋತ್ಸಾಹ ಕೊಟ್ಟಿದ್ದೀರಿ.. ಪ್ರೇಮ್ ಚಿತ್ರ ಬರುತ್ತದೆ ಎಂದರೆ ಎಲ್ಲರೂ ಹಾಡಿನ ಬಗ್ಗೆ ಕುತೂಹಲದಿಂದ ಇರುತ್ತಾರೆ. ಹಾಡುಗಳು ಅಷ್ಟರಮಟ್ಟಿಗೆ ವೈವಿಧ್ಯಮಯಾವಾಗಿರುತ್ತದೆ. ಆದರೆ ಈ ಹಾಡನ್ನು ನಾನು ನನ್ನ ದೃಷ್ಟಿಕೋನದಲ್ಲಿ ಬರೆದೆ. ಒಂದು ಬಾಟಲ್, ಒಂದು ಉಪ್ಪಿನಕಾಯಿ ಕಟೆಂಟ್ ಇಟ್ಕೊಂಡು ಹಾಡು ಬರೆದೆ. ಒಂದು ಪದ ತೆಗೆದು ಹಿಂದೆ ಹಾಕಬಹುದಿತ್ತು. ಬಾಟಲ್ ನ ಮೇಲೆ ಎತ್ತಿ ಎನ್ನುವ ಪದವನ್ನು ಹಿಂದೆ ಹಾಕಬಹುದಿತ್ತು. ಆದ್ರೆ ನಾನು ಕುತೂಹಲ ಇರಲಿ ಎಂದು ಆ ಪದವನ್ನು ಕೊನೆಯಲ್ಲಿ ಹಾಕಿದೆ ಎಂದು ಹೇಳಿದ್ದಾರೆ.
ಯಾರಿಗೂ ನೋವುಂಟು ಮಾಡುವುದು ನನ್ನ ಉದ್ದೇಶ ಅಲ್ಲ..
ಅಂತೆಯೇ, 'ಸಾಹಿತ್ಯ ರಚಿಸಬೇಕಾದರೆ, ಓರ್ವ ಸಾಹಿತಿ ಎರಡೂ ರೀತಿಯಾಗಿ ಬರೆಯಬಹುದು. ಆದರೆ ನಾನು ಅದನ್ನು ಅಶ್ಲೀಲವಾಗಿಯಾಗಲಿ, ಬೇರೆಯವರ ಭಾವನೆಗಳಿಗೆ ಧಕ್ಕೆ ತರಲಾಗಲಿ.. ತೊಂದರೆ ನೀಡಲಾಗಲಿ ಬರೆಯಲಿಲ್ಲ. ಇವತ್ತಿನರೆಗೂ ನಾನು ಅಂತಹ ಕೆಲಸ ಮಾಡಿಲ್ಲ.. ಸಾಯುವವರೆಗೂ ಮಾಡುವುದೂ ಇಲ್ಲ. ಅದರ ಅವಶ್ಯಕತೆ ಕೂಡ ನನಗಿಲ್ಲ.. ಈ ಹಾಡನ್ನು ಅವರು ಯಾವ ದಿಕ್ಕಿನಲ್ಲಿ ಅರ್ಥೈಸಿಕೊಂಡಿದ್ದಾರೋ ನನಗೆ ಗೊತ್ತಿಲ್ಲ. ಈ ಹಿಂದೆ ಕೂಡ ನಾನು ಯಾವ ಅರ್ಥದಲ್ಲಿ ಬರೆದೆ ಎಂಬುದನ್ನು ಮಾಧ್ಯಮಗಳ ಮುಂದೆಯೂ ಸ್ಪಷ್ಟಪಡಿಸಿದ್ದೇನೆ' ಎಂದು ಪ್ರೇಮ್ ಹೇಳಿದ್ದಾರೆ.
ಲೈಕ್, ಕಮೆಂಟ್ ಗಾಗಿ ಟೀಕೆ
ಅಂತೆಯೇ, ಕೆಲವರು ಲೈಕ್ ಮತ್ತು ಕಮೆಂಟ್ ಗಳಾಗಿ ತಮ್ಮನ್ನು ನಿಂದಿಸುತ್ತಿದ್ದಾರೆ. ಕೆಲವರಿಗೆ ಅದರಿಂದ ನೋವಾಗಿರಬಹುದು. ಪ್ರೇಮ್ ಈ ತರಹ ಕೂಡ ಬರೆಯುತ್ತಾರೆಯೇ ಎಂದು ಕೇಳಿದ್ದಾರೆ. ಆದರೆ ಓರ್ವ ಸಾಹಿತಿ ಆ ರೀತಿಯೂ ಬರೆಯಬೇಕು.. ಈ ರೀತಿ ಕೂಡ ಬರೆಯಬೇಕು. ಹಾಗೆಂದ ಮಾತ್ರಕ್ಕೆ ಕೀಳುಭಾವನೆ, ಕೀಳು ಮಟ್ಟದ ಸಾಹಿತ್ಯ ಬರೆಯಬಾರದು. ನಾನು ಈ ಹಾಡನ್ನು ಬಾಟಲ್ ಗಮನದಲ್ಲಿರಿಸಿಕೊಂಡು ಬರೆದಿದ್ದೇ ಹೊರತು ಬೇರೇನನ್ನೂ ಅಲ್ಲ. ಆದರೆ ಕೆಲವರು ಬೇರೆ ಬೇರೆ ಅರ್ಥದಲ್ಲಿ ಕಲ್ಪಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ನನ್ನ ಇಡೀ ಕುಟುಂಬವನ್ನು ನಿಂದಿಸುತ್ತಿದ್ದಾರೆ. ಲೈಕ್ ಕಮೆಂಟ್ ಗಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ. ಆದರೂ ಅವರಿಗೆ ಧನ್ಯವಾದ ಹೇಳುತ್ತೇನೆ. ಕಾಲೆಳೆಯುವುದು.. ಕೀಳಾಗಿ ಮಾತನಾಡುವುದು ಅದು ನಿಮಗೆ ಬಿಟ್ಟಿದ್ದು.. ನಿಮಗೆ ಒಳ್ಳೇದಾಗ್ಲಿ..' ಎಂದರು.
ಕ್ಷಮೆಯಾಚನೆ
ಅಲ್ಲದೆ, 'ನಾನು ಈ ಹಾಡು ಬರೆದಿದ್ದು ಯಾರಿಗೋ ನೋವಾಗಲಿ ಎಂದಲ್ಲ. ಒಂದು ವೇಳೆ ನಿಮಗೆ ನೋವಾಗಿದ್ದರೆ ನಾನು ಕ್ಷಮೆ ಕೋರುತ್ತೇನೆ. ಕ್ಷಮೆ ಕೇಳೋದ್ರಲ್ಲಿ ತಪ್ಪೇನಿಲ್ಲ. ಯಾಕಂದ್ರೆ ಇನ್ನೊಬ್ಬರಿಗೆ ನೋವು ಮಾಡಿ ಅದರ ಮೇಲೆ ಜೀವನ ಮಾಡಬೇಕು.. ಕೋಟೆ ಕಟ್ಟಬೇಕು ಅಂತೇನೂ ಇಲ್ಲ. ಅದರ ಅವಶ್ಯಕತೆಯೂ ನನಗಿಲ್ಲ ಎಂದು ಹೇಳಿದ್ದಾರೆ.
'ಸಾಂಗ್ ರಿರೈಟ್ ಮಾಡ್ತೀನಿ, ರಕೀಬ್ ಹಾಗೆ ಹೇಳಬಾರದಿತ್ತು'
'ಅಂತೆಯೇ ಹಾಡಿನಿಂದ ನೋವಾಗಿದ್ದರೆ ನಾನು ಮತ್ತೆ ಆ ಹಾಡನ್ನು ಪುನಃ ಬರೆಯುತ್ತೇನೆ. ಮತ್ತೆ ದೇಶಾದ್ಯಂತ ರಿಲೀಸ್ ಮಾಡ್ತೇನೆ. ಹಿಂದಿ ನನಗೆ ಅಷ್ಟಾಗಿ ಗೊತ್ತಿಲ್ಲ. ಕೆಲ ಪದಗಳ ಅರ್ಥ ಗೊತ್ತಿಲ್ಲ. ಆದರೆ ಹಿಂದಿ ಹಾಡು ಬರೆದಿದ್ದು ರಕೀಬ್ ಆಲಂ ಅವರು. ರಕೀಬ್ ಅವರು ಕನ್ನಡವನ್ನೇ ಅನುವಾದ ಮಾಡಿದ್ದಾಗಿ ಹೇಳಿಕೆ ನೀಡಿದ್ದಾರೆ. ವಿವಾದದಿಂದಾಗಿ ಅವರು ಆ ರೀತಿ ಹೇಳಿರಬಹುದು. ಅವರು ನಮ್ಮ ಬರಹಗಾರರು. ಎಲ್ಲ ಹಾಡುಗಳನ್ನು ಅವರೇ ಬರೆದಿದ್ದು. ಬಹುಶಃ ಅವರು ಭಯದಿಂದ ಹಾಗೆ ಹೇಳಿರಬಹುದು ಎಂದು ಪ್ರೇಮ್ ಹೇಳಿದ್ದಾರೆ.
ನೋರಾ ಮಾತನಾಡಿದ್ದು ತಪ್ಪು
ಇದೇ ವೇಳೆ ನಟಿ ನೋರಾ ಫತೇಹಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಪ್ರೇಮ್, 'ಅವರ ಹೇಳಿಕೆ ತಪ್ಪು. ಯಾರೇ ನಟರಾಗಲಿ ಮೊದಲು ಚಿತ್ರೀಕರಣಕ್ಕಿಂತ ಮುಂಚೆ ಹಾಡು ಕೇಳುತ್ತಾರೆ. ಸಾಹಿತ್ಯ ಬರದೇ ಅವರು ಹೇಗೆ ಎಕ್ಸ್ ಪ್ರೆಷನ್ ನೀಡಲು ಸಾಧ್ಯ. ಅದಾಗ್ಯೂ ಅವರೇಕೆ ಆ ರೀತಿ ಮಾತನಾಡಿದರೋ ಗೊತ್ತಿಲ್ಲ. ವಿವಾದವಾಗುತ್ತಿದೆ ಅದರಿಂದ ತಪ್ಪಿಸಿಕೊಳ್ಳಬೇಕು ಎಂದು ಬಹುಶಃ ಅವರು ಆ ರೀತಿ ಹೇಳಿಕೆ ನೀಡಿರಬಹುದು. ಆದರೆ ಮೊನ್ನೆ ಹಾಡು ಬಿಡುಗಡೆ ವೇಳೆಯೂ ನೋರಾ ಅವರು ಹಾಡಿನ ಬಗ್ಗೆ ಮಾತನಾಡಿ ಸಂತೋಷ ವ್ಯಕ್ತಪಡಿಸಿದ್ದರು. 'ನಾನು ಹಾಡು ಕೇಳಿದೆ ತುಂಬಾ ಚೆನ್ನಾಗಿದೆ' ಎಂದಿದ್ದರು. ಆದರೆ ವಿವಾದವಾಗುತ್ತಲೇ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಪ್ರೇಮ್ ಹೇಳಿದ್ದಾರೆ.
Advertisement