

ಮುಂಬೈ: ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಡಿ ದಿ ಡೆವಿಲ್ ಚಿತ್ರದ ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ನೋರಾ ಫತೇಹಿ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದು, ನಿರ್ದೇಶಕ ಪ್ರೇಮ್ ಕುರಿತು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
‘ಕೆಡಿ’ (KD) ಸಿನಿಮಾದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಭಾರಿ ವಿವಾದಕ್ಕೆ ಕಾರಣವಾಗಿದ್ದು, ಈ ಹಾಡಿನಲ್ಲಿ ಅಶ್ಲೀಲ ಸಾಹಿತ್ಯ ಇದೆ ಎಂಬ ಕಾರಣಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
ಉತ್ತರ ಭಾರತದಲ್ಲಿ ಈ ಚಿತ್ರದ ಹಿಂದಿ ಅವತರಣಿಕೆಯ ಹಾಡಿಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಹಿಂದಿ ಆವೃತ್ತಿಯ ಹಾಡನ್ನು ನಿರ್ಬಂಧಿಸಿ ಡಿಲೀಟ್ ಮಾಡಲಾಗಿದೆ.
ಅಲ್ಲದೆ ಈ ಹಾಡಿನಲ್ಲಿ ನರ್ತಿಸಿರುವ ನಟಿ ನೋರಾ ಫತೇಹಿ ವಿರುದ್ಧವೂ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ತಮ್ಮ ವಿರುದ್ಧ ಕೇಳಿಬರುತ್ತಿರುವ ಟೀಕೆಗಳಿಗೆ ಕೊನೆಗೂ ನಟಿ ನೋರಾ ಫತೇಹಿ ಅವರು ಮೊದಲ ಬಾರಿಗೆ ಮೌನ ಮುರಿದಿದ್ದಾರೆ.
ನಿರ್ದೇಶಕ ಪ್ರೇಮ್ ಗೆ ಅಂದೇ ಎಚ್ಚರಿಕೆ ನೀಡಿದ್ದೆ
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಡಿಯೋ ಮೂಲಕ ಮಾತನಾಡಿರುವ ನಟಿ ನೋರಾ ಫತೇಹಿ, '‘ಕೆಲವು ವಿಷಯಗಳನ್ನು ನಾನು ಸ್ಪಷ್ಟಪಡಿಸಬೇಕಿದೆ. ನಾನು ಈ ಹಾಡನ್ನು 3 ವರ್ಷಗಳ ಹಿಂದೆ ಕನ್ನಡ ಭಾಷೆಯಲ್ಲಿ ಚಿತ್ರೀಕರಿಸಿದ್ದು, ಸಂಜಯ್ ದತ್ ಅವರಂತಹ ದೊಡ್ಡ ಕಲಾವಿದರು ಇರುವ ದೊಡ್ಡ ಸಿನಿಮಾ ಎಂಬ ಕಾರಣಕ್ಕೆ ನಾನು ಒಪ್ಪಿಕೊಂಡಿದ್ದೆ.
ಕನ್ನಡ ಭಾಷೆ ನನಗೆ ತಿಳಿಯುವುದಿಲ್ಲ. ಹಾಡಿನಲ್ಲಿ ಇಷ್ಟು ಕೆಟ್ಟ ಸಾಹಿತ್ಯ ಇದೆ ಎಂಬುದು ನನಗೆ ಗೊತ್ತೇ ಇರಲಿಲ್ಲ.. ಶೂಟಿಂಗ್ ಮಾಡುವಾಗ ಹಾಡಿನ ಅರ್ಥ ತಿಳಿಯಲು ನಾನು ಚಿತ್ರತಂಡದ ಮೇಲೆ ಅವಲಂಬಿತಳಾಗಿದ್ದೆ. ಅವರು ಭಾಷಾಂತರ ಮಾಡಿ ಹೇಳಿದಾಗ ನನಗೆ ಯಾವುದೂ ಅಸಭ್ಯ ಅಂತ ಅನಿಸಿರಲಿಲ್ಲ’ ಎಂದು ನೋರಾ ಫತೇಹಿ ಹೇಳಿದ್ದಾರೆ.
‘ಆದರೆ ಈಗ ಹಿಂದಿಗೆ ಭಾಷಾಂತರ ಮಾಡಿರುವುದು ತುಂಬ ಆಕ್ಷೇಪಾರ್ಹವಾಗಿದೆ. ಅದರ ಬಗ್ಗೆ ನನಗೆ ಮಾಹಿತಿಯೇ ಇರಲಿಲ್ಲ. ನನ್ನ ಅನುಮತಿಯನ್ನು ಚಿತ್ರತಂಡದವರು ಪಡೆದುಕೊಂಡಿಲ್ಲ. ಹಾಡು ಬಿಡುಗಡೆಗೆ ನನ್ನನ್ನು ಕರೆದಾಗ ನನ್ನ ಫೋಟೋಗಳನ್ನು ಬಳಸಿದ ರೀತಿ ಕಂಡು ನನಗೆ ಬೇಸರ ಆಯಿತು. ನನ್ನ ಮತ್ತು ಸಂಜಯ್ ದತ್ ಅವರ ಫೋಟೋಗಳನ್ನು ಎಐ ಮೂಲಕ ಸೃಷ್ಟಿಸಿ ಬಳಸಿದ್ದಾರೆ. ಅದನ್ನು ನಾನು ವಿರೋಧಿಸುತ್ತೇನೆ. ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲೇ ನನಗೆ ಕಿರಿಕಿರಿ ಆಯಿತು’ ಎಂದು ನೋರಾ ಫತೇಹಿ ಹೇಳಿದ್ದಾರೆ.
ನನ್ನ ಘನತೆಗೆ ಧಕ್ಕೆ, ಪ್ರಚಾರಕ್ಕೆ ಬರಲ್ಲ
ಅಂತೆಯೇ ‘ನಾನು ಅಲ್ಲಿ ಎಲ್ಲರ ಎದುರು ಗೌರವಯುತವಾಗಿ ನಡೆದುಕೊಳ್ಳಲೇ ಬೇಕಿತ್ತು. ಹಿಂದಿ ವರ್ಷನ್ ಹಾಡು ಪ್ಲೇ ಮಾಡಿದಾಗ ನನಗೆ ಎಲ್ಲವೂ ತಿಳಿಯಿತು. ಇದು ವಿವಾದ ಆಗುತ್ತೆ ಎಂಬುದು ಗೊತ್ತಾಯಿತು. ಏಕೆಂದರೆ ನನಗೆ ಹಿಂದಿ ಅರ್ಥ ಆಗುತ್ತದೆ.
ಇದು ಸರಿ ಅಲ್ಲ ಅಂತ ನಾನು ನಿರ್ದೇಶಕರಿಗೆ ಆಗಲೇ ಎಚ್ಚರಿಕೆ ನೀಡಿದೆ. ನಾನು ಸಿನಿಮಾದಿಂದ ಹೊರಗೆ ಬರುತ್ತೇನೆ. ನಾವು ಯಾವುದೇ ಕಾರಣಕ್ಕೂ ಇದನ್ನು ಪ್ರಚಾರ ಮಾಡಲ್ಲ. ನನ್ನ ಘನತೆಗೆ ಧಕ್ಕೆ ಆಗಿದೆ ಅಂತ ನಿರ್ದೇಶಕರಿಗೆ ಹೇಳಿದೆ’ ಎಂದು ನೋರಾ ಹೇಳಿದ್ದಾರೆ.
ಅವರಿಗೆ ಭಯ ಹುಟ್ಟಿಸಬೇಕು
‘ನನ್ನಂಥ ಕಲಾವಿದರಿಗೆ ಹೆಚ್ಚಿನ ಶಕ್ತಿ ಇರುವುದಿಲ್ಲ. ಇಂಥ ಚಿತ್ರರಂಗದಲ್ಲಿ ನನ್ನ ಅಭಿಪ್ರಾಯವನ್ನು ಯಾರೂ ಕೇಳಲ್ಲ. ವಿರೋಧ ವ್ಯಕ್ತವಾದ ಬಳಿಕ ಹಾಡನ್ನು ಡಿಲೀಟ್ ಮಾಡಿದ್ದಾರೆ ಎಂಬುದು ಸಮಾಧಾನಕರ ಸಂಗತಿ. ನೀವೆಲ್ಲ ವಿರೋಧಿಸಿದಕ್ಕೆ ಧನ್ಯವಾದಗಳು. ಇಂಥ ಹಾಡು ಸರಿಯಲ್ಲ ಎನಿಸಿದರೆ ಅದನ್ನು ತಯಾರಿಸಿದ ಚಿತ್ರತಂಡವನ್ನು ಹೊಣೆಗಾರರನ್ನಾಗಿ ಮಾಡಬೇಕು.
ವಿರೋಧಿಸುವಾಗ ಅವರ ಹೆಸರು ಮತ್ತು ಫೋಟೋವನ್ನೇ ಬಳಸಬೇಕು. ಆಗ ಮಾತ್ರ ಅವರಿಗೆ ಭಯ ಇರುತ್ತದೆ. ಇನ್ಮುಂದೆ ಬಹಳ ಎಚ್ಚರಿಕೆಯಿಂದ ಇರುತ್ತೇನೆ’ ಎಂದು ನೋರಾ ಫತೇಹಿ ಅವರು ಸ್ಪಷ್ಟನೆ ನೀಡಿದ್ದಾರೆ.
Advertisement