ಮುಂಬೈ: ವಾರದ ಮೊದಲ ದಿನದಲ್ಲೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ರಕ್ತಪಾತವಾಗಿದ್ದು, ಹೂಡಿಕೆದಾರರ ಬರೊಬ್ಬರಿ 14 ಲಕ್ಷ ಕೋಟಿ ರೂ ನಷ್ಟವಾಗಿದೆ.
ಹೌದು.. ಕುಸಿತದ ಹಾದಿ ಹಿಡಿದಿರುವ ಭಾರತೀಯ ಷೇರುಮಾರುಕಟ್ಟೆ ವಾರದ ಮೊದಲ ದಿನ ಅಂದರೆ ಇಂದು ಸೋಮವಾರ ಭಾರಿ ಪ್ರಮಾಣದಲ್ಲಿ ಕುಸಿತವಾಗಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.1.36ರಷ್ಟು ಕುಸಿತ ಕಂಡಿದ್ದರೆ, ನಿಫ್ಟಿ ಶೇ.1.47ರಷ್ಟು ಕುಸಿತ ದಾಖಲಿಸಿದೆ. ಸೆನ್ಸೆಕ್ಸ್ ಇಂದು ಬರೊಬ್ಬರಿ 1,048.90 ಅಂಕಗಳ ಇಳಿಕೆಯೊಂದಿಗೆ 76,330.01 ಅಂಕಗಳಿಗೆ ಇಳಿಕೆಯಾಗಿದ್ದರೆ, ನಿಫ್ಟಿ ಕೂಡ ಬರೊಬ್ಬರಿ 345.55 ಅಂಕಗಳ ಇಳಿಕೆಯೊಂದಿಗೆ 23,085.95 ಅಂಕಗಳಿಗೆ ಕುಸಿತವಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಹೂಡಿಕೆದಾರರ 14 ಲಕ್ಷ ಕೋಟಿ ನಷ್ಟ
ಇನ್ನು ಇಂದಿನ ಮಾರುಕಟ್ಟೆಯ ಮಹಾ ಕುಸಿತದಿಂದಾಗಿ ಬಿಎಸ್‌ಇ-ಪಟ್ಟಿಮಾಡಿದ ಎಲ್ಲಾ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು 14.54 ಲಕ್ಷ ಕೋಟಿ ರೂ.ಗಳಷ್ಟು ಕುಸಿದು ಒಟ್ಟು 416.08 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ.
ಇಂದಿನ ಮಹಾ ಕುಸಿತಕ್ಕೆ ಕಾರಣ
ಕಳೆದ ಶುಕ್ರವಾರ ಬಿಡುಗಡೆಯಾದ ಅಮೆರಿಕ ಉದ್ಯೋಗ ವರದಿಯು ಜಾಗತಿಕ ಮಾರುಕಟ್ಟೆಗಳನ್ನು ಬೆಚ್ಚಿಬೀಳಿಸಿದ್ದು, ಫೆಡರಲ್ ರಿಸರ್ವ್ ತನ್ನ ನಿರೀಕ್ಷಿತ ದರ ಕಡಿತವನ್ನು ವಿಳಂಬಗೊಳಿಸಬಹುದು ಎಂಬ ಆತಂಕವನ್ನು ಹೆಚ್ಚಿಸಿದೆ. ಡಿಸೆಂಬರ್‌ನಲ್ಲಿ ಅಮೆರಿಕ ನಿರುದ್ಯೋಗ ದರವು 4.1% ಕ್ಕೆ ಇಳಿದಿದ್ದು, ಬಲವಾದ ಉದ್ಯೋಗ ಬೆಳವಣಿಗೆಯೊಂದಿಗೆ, ವಿತ್ತೀಯ ಸಡಿಲಿಕೆಯು ಹತ್ತಿರದ ಅವಧಿಯಲ್ಲಿ ಕಡಿಮೆ ಸಾಧ್ಯತೆ ಇದೆ ಎಂದು ಸೂಚಿಸುತ್ತದೆ.
ಇದು ಜಾಗತಿಕ ಲಿಕ್ವಿಡಿಟಿ ಬಿಗಿಯಾಗಲು ಕಾರಣವಾಗಿದೆ, ಇದು ಭಾರತದಂತಹ ಉದಯೋನ್ಮುಖ ಮಾರುಕಟ್ಟೆಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಹೇರಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಿಯಾಲ್ಟಿ, ತೈಲ ಮತ್ತು ಅನಿಲ, ಬಂಡವಾಳ ಸರಕುಗಳು, ವಿದ್ಯುತ್, ಪಿಎಸ್‌ಯು, ಲೋಹ, ಮಾಧ್ಯಮ ವಲಯದ ಷೇರುಗಳ ಭಾರಿ ಕುಸಿತಕಂಡಿದ್ದು, ಉಳಿದಂತೆ ಇಂದು ಎಲ್ಲಾ ವಲಯದ ಸೂಚ್ಯಂಕಗಳು ನಷ್ಟದಲ್ಲಿ ವಹಿವಾಟು ಕೊನೆಗೊಳಿಸಿವೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ನಿಫ್ಟಿಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಟ್ರೆಂಟ್, ಅದಾನಿ ಎಂಟರ್‌ಪ್ರೈಸಸ್, ಭಾರತ್ ಎಲೆಕ್ಟ್ರಾನಿಕ್ಸ್, ಬಿಪಿಸಿಎಲ್, ಅದಾನಿ ಪೋರ್ಟ್ಸ್ ಸಂಸ್ಥೆಯ ಷೇರುಗಳು ಹೆಚ್ಚಿನ ಪ್ರಮಾಣದ ನಷ್ಟ ಕಂಡಿದೆ.
ಅಂತೆಯೇ ಟಿಸಿಎಸ್, ಇಂಡಸ್‌ಇಂಡ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಎಚ್‌ಯುಎಲ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿವೆ.