ಹೈದರಾಬಾದ್: ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO)ಯಲ್ಲಿನ ಬದಲಾವಣೆಗಳ ಕುರಿತು ಮಾ.07 ರಂದು ಮಾಹಿತಿ ನೀಡಿದ್ದಾರೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಒ) ವಹಿವಾಟುಗಳು ಇನ್ಮುಂದೆ 3.0 ಆವೃತ್ತಿಗೆ ಬದಲಾಗಲಿವೆ. ಬ್ಯಾಂಕಿನ ಮಾದರಿಯಲ್ಲಿ ಇಪಿಎಫ್‌ಒ ಚಟುವಟಿಕೆಗಳನ್ನು ನಡೆಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇಪಿಎಫ್‌ಒ 3.0 ಆವೃತ್ತಿ, ಚಂದಾದಾರರು ಎಟಿಎಂಗಳಿಂದ ಹಣವನ್ನು ಹಿಂಪಡೆಯಲು ಅನುವು ಮಾಡಿಕೊಡುತ್ತದೆ ಮತ್ತು ಹಲವಾರು ಇತರ ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ.
ಬೇಗಂಪೇಟ್‌ನ ಬ್ರಹ್ಮನವಾಡಿಯಲ್ಲಿ ಹೊಸದಾಗಿ ನಿರ್ಮಿಸಲಾದ ಇಪಿಎಫ್‌ಒ ಕಚೇರಿ, ತೆಲಂಗಾಣ ಪ್ರಾದೇಶಿಕ ಕಚೇರಿಯನ್ನು ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಅವರೊಂದಿಗೆ ಮನ್ಸುಖ್ ಮಾಂಡವಿಯಾ ಗುರುವಾರ ಉದ್ಘಾಟಿಸಿದರು. ಈ ವೇಳೆ, ಮಾತನಾಡಿದ ಕೇಂದ್ರ ಸಚಿವರು ಇಪಿಎಫ್ ಚಂದಾದಾರರು ಎಟಿಎಂಗಳಿಗೆ ಹೋಗಿ ತಮ್ಮ ಇಪಿಎಫ್ ಹಣವನ್ನು ಡ್ರಾ ಮಾಡಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಣ್ಣಪುಟ್ಟ ಮಾರ್ಪಾಡುಗಳನ್ನು ಆನ್‌ಲೈನ್‌ನಲ್ಲಿ ಮಾಡಲು ಅವಕಾಶ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
"ಮುಂದಿನ ದಿನಗಳಲ್ಲಿ, EPFO 3.0 ಆವೃತ್ತಿ ಬರಲಿದೆ. ಇದರರ್ಥ EPFO ಬ್ಯಾಂಕಿಗೆ ಸಮಾನವಾಗುತ್ತದೆ. ಬ್ಯಾಂಕಿನಲ್ಲಿ ವಹಿವಾಟುಗಳನ್ನು ಹೇಗೆ ನಡೆಸಲಾಗುತ್ತದೆಯೋ ಹಾಗೆಯೇ, ನೀವು (EPFO ಚಂದಾದಾರರು) ನಿಮ್ಮ ಸಾರ್ವತ್ರಿಕ ಖಾತೆ ಸಂಖ್ಯೆ (UAN) ಅನ್ನು ಹೊಂದಿರುತ್ತೀರಿ ಮತ್ತು ನಿಮ್ಮ ಎಲ್ಲಾ ಕೆಲಸಗಳನ್ನು ನೀವು ಮಾಡಲು ಸಾಧ್ಯವಾಗುತ್ತದೆ" ಎಂದು ಸಚಿವರು ಹೇಳಿದರು.
"ನೀವು ಇಪಿಎಫ್‌ಒ ಕಚೇರಿಗಳಿಗೆ ಭೇಟಿ ನೀಡಬೇಕಾಗಿಲ್ಲ ಅಥವಾ ನೀವು ಉದ್ಯೋಗದಾತರ ಬಳಿಗೆ ಹೋಗಬೇಕಾಗಿಲ್ಲ. ಅದು ನಿಮ್ಮ ಹಣ ಮತ್ತು ನೀವು ಬಯಸಿದಾಗ ಅದನ್ನು ಹಿಂಪಡೆಯಬಹುದು. ಈಗ ಹಣ ಡ್ರಾ ಮಾಡಲು ನೀವು ಇನ್ನೂ ಇಪಿಎಫ್‌ಒ ಕಚೇರಿಗಳಿಗೆ ಹೋಗಬೇಕಾದ ವ್ಯವಸ್ಥೆ ಇದೆ. ಮುಂಬರುವ ದಿನಗಳಲ್ಲಿ, ನೀವು ಬ್ಯಾಂಕ್ ಗಳ ಮಾದರಿಯಲ್ಲಿ ಯಾವಾಗ ಬೇಕಾದರೂ ಎಟಿಎಂಗಳಿಂದ EPF ನಿಮ್ಮ ಹಣವನ್ನು ಹಿಂಪಡೆಯಬಹುದು ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಇಪಿಎಫ್‌ಒದಲ್ಲಿ ನಾವು ಅಂತಹ ಸುಧಾರಣೆಗಳನ್ನು ಕೈಗೊಳ್ಳುತ್ತಿದ್ದೇವೆ, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಇಪಿಎಫ್‌ಒ ಬದಲಾಗುತ್ತಿದೆ ಮತ್ತು ಸುಧಾರಣೆಗಳಿಗೆ ಒಳಗಾಗುತ್ತಿದೆ ಎಂದು ಹೇಳಿದರು.
EPFO ಗಳಿಗೆ ಸಂಬಂಧಿಸಿದ ದೂರುಗಳು ಕಡಿಮೆಯಾಗುತ್ತಿವೆ ಮತ್ತು ಸೇವೆಗಳು ಹೆಚ್ಚುತ್ತಿವೆ ಎಂದು ಅವರು ಹೇಳಿದರು, ಜನಪರ ವಿಧಾನದೊಂದಿಗೆ ಇಪಿಎಫ್‌ಒ ವ್ಯವಸ್ಥೆ ಮತ್ತು ಕಾರ್ಯ ಶೈಲಿ ಬದಲಾಗಿದೆ ಎಂದು ಹೇಳಿದರು.
ಇಪಿಎಫ್‌ಒ ವೇದಿಕೆಯು ತ್ವರಿತ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದೆ ಎಂದು ಹೇಳಿರುವ ಸಚಿವರು, ಫಂಡ್ ವರ್ಗಾವಣೆ, ಹಕ್ಕು ವರ್ಗಾವಣೆ ಮತ್ತು (ಚಂದಾದಾರರ) ಹೆಸರಿನಲ್ಲಿ ತಿದ್ದುಪಡಿಗಳು, ಯಾವುದೇ ಬ್ಯಾಂಕಿನಿಂದ ಪಿಂಚಣಿ ಹಿಂಪಡೆಯುವಿಕೆಗಳನ್ನು ಫಲಾನುಭವಿಗಳಿಗಾಗಿ ಕೈಗೊಂಡ ಸುಧಾರಣಾ ಕ್ರಮಗಳನ್ನು ಉಲ್ಲೇಖಿಸಿದ್ದಾರೆ.