ಮಾರುತಿ ಸುಜುಕಿ ಆಲ್ಟೊ ಭಾರತದಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ಮಾರಾಟವಾದ ಕಾರು ಆಗಿದ್ದು, 4.7 ಮಿಲಿಯನ್ ಕಾರುಗಳಿಗೂ ಹೆಚ್ಚು ಮಾರಾಟವಾಗಿದೆ. ನಂತರ ವ್ಯಾಗನ್‌ಆರ್ 3.4 ಮಿಲಿಯನ್ ಯೂನಿಟ್‌ಗಳಿಗೂ ಹೆಚ್ಚು ಮಾರಾಟವಾಗಿದ್ದು, ಸ್ವಿಫ್ಟ್ 3.2 ಮಿಲಿಯನ್ ಯೂನಿಟ್‌ಗಳಿಗೂ ಹೆಚ್ಚು ಮಾರಾಟವಾಗಿದೆ ಎಂದು ಕಂಪನಿ ಬುಧವಾರ ತಿಳಿಸಿದೆ.
ಬ್ರೆಝಾ ಮತ್ತು ಫ್ರಾಂಕ್ಸ್ ಕೂಡ ತನ್ನ ಪೋರ್ಟ್‌ಫೋಲಿಯೊದಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ವಾಹನಗಳಲ್ಲಿ ಸ್ಥಾನ ಪಡೆದಿವೆ.
ಮಾರುತಿ ಸುಜುಕಿ ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿದ್ದು, ಆಲ್ಟೊ ಕಾರು ಕಂಪನಿಯ ಅತಿ ಹೆಚ್ಚು ಮಾರಾಟವಾದ ಕಾರು ಮಾತ್ರವಲ್ಲದೆ ಇಲ್ಲಿಯವರೆಗೆ ದೇಶದಲ್ಲಿ ಒಟ್ಟಾರೆಯಾಗಿ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಗೌರವಕ್ಕೆ ಪಾತ್ರವಾಗಿದೆ.
ಹೊಸ ಮೈಲಿಗಲ್ಲು
ಮಾರುತಿ ಸುಜುಕಿ ದೇಶಿಯವಾಗಿ ಮೂರು ಕೋಟಿಗೂ ಹೆಚ್ಚು ಕಾರುಗಳನ್ನು ಮಾರಾಟ ಮಾಡುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. ಬುಧವಾರ 30 ಮಿಲಿಯನ್ (3 ಕೋಟಿ) ಪ್ರಯಾಣಿಕ ವಾಹನಗಳ ದೇಶೀಯ ಮಾರಾಟವನ್ನು ದಾಟಿದೆ ಎಂದು ಕಂಪನಿ ಹೇಳಿದೆ.
ಕಂಪನಿ ಕಾರ್ಯಾಚರಣೆ ಪ್ರಾರಂಭಿಸಿದ 42 ವರ್ಷಗಳಲ್ಲಿ ಈ ಮೈಲಿಗಲ್ಲು ಸಾಧಿಸಿದೆ. ಈ ಮೈಲಿಗಲ್ಲನ್ನು ತಲುಪಿದ ಮೊದಲ ಭಾರತೀಯ ಕಾರು ತಯಾರಿಕಾ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಂಪನಿಯು ತನ್ನ ಮೊದಲ ಕಾರು ಮಾರುತಿ 800 ಅನ್ನು ಡಿಸೆಂಬರ್ 14, 1983 ರಂದು ಗ್ರಾಹಕರಿಗೆ ತಲುಪಿಸಿತು. ಇದು ಭಾರತದ ಸಾಮೂಹಿಕ ಕಾರು ಮಾಲೀಕತ್ವದ ಯುಗದ ಆರಂಭವನ್ನು ಗುರುತಿಸಿತು. ಇಂದು, ಮಾರುತಿ ಸುಜುಕಿ 170ಕ್ಕೂ ಹೆಚ್ಚು ರೂಪಾಂತರಗಳೊಂದಿಗೆ 19 ಮಾಡೆಲ್ ಗಳನ್ನು ನೀಡುತ್ತದೆ.
ಕಂಪನಿಯ ಈ ಬೆಳವಣಿಗೆಯು 30 ಮಿಲಿಯನ್ ಭಾರತೀಯ ಗ್ರಾಹಕರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹಿಸಾಶಿ ಟಕೆಯುಚಿ ಅವರು ಹೇಳಿದ್ದಾರೆ.