ಮುಂಬೈ: ನಿನ್ನೆಯಷ್ಟೇ ಚೇತೋಹಾರಿ ವಹಿವಾಟು ನಡೆಸಿದ್ದ ಭಾರತೀಯ ಷೇರುಮಾರುಕಟ್ಟೆ ಇಂದು ಅಲ್ಪ ಪ್ರಮಾಣದ ಕುಸಿತದೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ.
ಮಂಗಳವಾರ ಭಾರತೀಯ ಷೇರುಮಾರುಕಟ್ಟೆ ಅಲ್ಪ ಪ್ರಮಾಣದ ಕುಸಿತ ಕಂಡಿದ್ದು, ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.26ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.18ರಷ್ಟು ಕುಸಿತ ದಾಖಲಿಸಿದೆ.
ಸೆನ್ಸೆಕ್ಸ್ ಇಂದು 206.61 ಅಂಕಗಳ ಇಳಿಕೆಯೊಂದಿಗೆ 80,157.88 ಅಂಕಗಳಿಗೆ ಕುಸಿತವಾಗಿದ್ದರೆ, ನಿಫ್ಟಿ 45.45 ಅಂಕಗಳ ಇಳಿಕೆಯೊಂದಿಗೆ 24,579.60 ಅಂಕಗಳಿಗೆ ಕುಸಿತವಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ವಲಯವಾರು ಬ್ಯಾಂಕಿಂಗ್ ಮತ್ತು ಹಣಕಾಸು ಷೇರುಗಳು ಕುಸಿತ ಕಂಡವು. ಆರೋಗ್ಯ ರಕ್ಷಣಾ ವಲಯದ ಷೇರುಗಳು ಕೂಡ ಕಳಪೆ ವಹಿವಾಟು ತೋರಿಸಿತು.
ಇದಕ್ಕೆ ವ್ಯತಿರಿಕ್ತವಾಗಿ, ಮಾಧ್ಯಮ, ಲೋಹ ಮತ್ತು ರಿಯಾಲ್ಟಿ ಷೇರುಗಳಲ್ಲಿನ ಸಕಾರಾತ್ಮಕ ಚಲನೆಯಿಂದ ಪಿಎಸ್‌ಯು ಬ್ಯಾಂಕುಗಳ ಷೇರುಗಳ ವಹಿವಾಟು ಸ್ಥಿರವಾಗಿದ್ದವು.
ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಮಹೀಂದ್ರಾ ಮತ್ತು ಮಹೀಂದ್ರಾ, ಏಷ್ಯನ್ ಪೇಂಟ್ಸ್, ಕೋಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಟಾಟಾ ಮೋಟಾರ್ಸ್ ಮತ್ತು ಲಾರ್ಸೆನ್ & ಟೂಬ್ರೊ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.
600 ಅಂಕ ಏರಿಕೆ ಕಂಡಿದ್ದ ಸೆನ್ಸೆಕ್ಸ್
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಇಂದು ಒಂದು ಹಂತದಲ್ಲಿ ಬರೊಬ್ಬರಿ 600 ಅಂಕಗಳಷ್ಟು ಏರಿಕೆ ಕಂಡು 80,761 ಅಂಕಗಳಿಗೆ ಏರಿಕೆಯಾಗಿತ್ತು.
ಆದರೆ ದಿನದ ವಹಿವಾಟು ಅಂತ್ಯದ ಸಮಯ ಹತ್ತಿರವಾಗುತ್ತಿದ್ದಂತೆಯೇ ಇಡೀ ಚಿತ್ರಣವೇ ಬದಲಾಗಿ ಗ್ರೀನ್ ನಲ್ಲಿದ್ದ ಸೂಚ್ಯಂಕಗಳು ರೆಡ್ ಗೆ ಬದಲಾಯಿತು. ದಿನದ ವಹಿವಾಟು ಅಂತ್ಯದ ವೇಳೆ ಸೆನ್ಸೆಕ್ಸ್ 200 ಅಂಕಗಳಷ್ಟು ಕುಸಿತದೊಂದಿಗೆ ತನ್ನ ದಿನದ ವಹಿವಾಟು ಅಂತ್ಯಗೊಳಿಸಿತು.
ಫೆಡರಲ್ ಬ್ಯಾಂಕ್ ನಿರ್ಧಾರಕ್ಕಾಗಿ ಕಾಯುತ್ತಿರುವ ಹೂಡಿಕೆದಾರರು
ಇನ್ನು ಈ ತಿಂಗಳ ಕೊನೆಯಲ್ಲಿ ಅಮೆರಿಕದ ಫೆಡರಲ್ ಬ್ಯಾಂಕ್ ತನ್ನ ಬಡ್ಡಿದರಗಳನ್ನು ಕಡಿಮೆ ಮಾಡುತ್ತದೆ ಎಂದು ಮಾರುಕಟ್ಟೆ ಹೂಡಿಕೆದಾರರು ವ್ಯಾಪಕವಾಗಿ ನಿರೀಕ್ಷಿಸುತ್ತಿದ್ದಾರೆ. ಇದು ಹೂಡಿಕೆದಾರರು ಎಚ್ಚರಿಕೆಯ ಹೂಡಿಕೆ ಮಾಡಲು ಕಾರಣ ಎಂದು ಹೇಳಲಾಗಿದೆ.