ಮುಂಬೈ: ಸತತ 3ನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಇಳಿಕೆ ಕಂಡಿದ್ದು, ಬುಧವಾರ ಅಮೆರಿಕ ಸರ್ಕಾರದ H-1B visa ಶುಲ್ಕ ಏರಿಕೆ ಆತಂಕ ಅಂಶವು ಐಟಿ ವಲಯದ ಷೇರುಗಳ ಮೌಲ್ಯ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ.
ಬುಧವಾರವೂ ಭಾರತೀಯ ಷೇರುಮಾರುಕಟ್ಟೆ ನಿರಾಶಾದಾಯಕ ವಹಿವಾಟು ನಡೆಸಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ0.47ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.45ರಷ್ಟು ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ ಇಂದು ಕೂಡ 386.47ಅಂಕಗಳ ಇಳಿಕೆಯೊಂದಿಗೆ 81,715.63 ಅಂಕಗಳಿಗೆ ಕುಸಿತವಾಗಿದ್ದರೆ, ನಿಫ್ಟಿ 112.60 ಅಂಕಗಳ ಇಳಿಕೆಯೊಂದಿಗೆ 25,056.90 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಐಟಿ, ಬಂಡವಾಳ ಸರಕುಗಳು ಮತ್ತು ಕೈಗಾರಿಕಾ ವಲಯಗಳ ಷೇರುಗಳ ಮೌಲ್ಯದಲ್ಲಿ ಭಾರಿ ಬದಲಾವಣೆ ಕಂಡುಬಂದಿದೆ. ರಿಯಾಲ್ಟಿ, ಮಾಹಿತಿ ತಂತ್ರಜ್ಞಾನ ಮತ್ತು ಆಟೋ ಷೇರುಗಳು ಕುಸಿತ ದಾಖಲಿಸಿವೆ.
ಯುಎಸ್ H-1B ವೀಸಾ ಶುಲ್ಕದಲ್ಲಿನ ತೀವ್ರ ಏರಿಕೆಯು ಹೂಡಿಕೆದಾರರ ಭಾವನೆಯನ್ನು ಕುಗ್ಗಿಸುತ್ತಿರುವುದರಿಂದ ಬುಧವಾರ ಸತತ ಮೂರನೇ ದಿನವೂ ಐಟಿ ಷೇರುಗಳು ಕುಸಿದವು.
ಬಿಎಸ್‌ಇಯಲ್ಲಿ ಮಾಸ್ಟೆಕ್ ಲಿಮಿಟೆಡ್ ಷೇರುಗಳು ಶೇ. 3.42 ರಷ್ಟು, ಇನ್ಫೋಬೀನ್ಸ್ ಟೆಕ್ನಾಲಜೀಸ್ ಶೇ. 3.41 ರಷ್ಟು, ವಿಪ್ರೋ ಶೇ. 2.06 ರಷ್ಟು, ಟೆಕ್ ಮಹೀಂದ್ರಾ ಶೇ. 1.30 ರಷ್ಟು, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಶೇ. 0.86 ರಷ್ಟು ಮತ್ತು ಇನ್ಫೋಸಿಸ್ ಸಂಸ್ಥೆಯ ಷೇರುಗಳ ಮೌಲ್ಯ ಶೇ. 0.24 ರಷ್ಟು ಕುಸಿದವು.
ಕಳೆದ ವಾರ, ಟ್ರಂಪ್ ಆಡಳಿತವು H-1B ವೀಸಾಗಳ ಮೇಲೆ ಒಂದು ಬಾರಿ USD 1,00,000 ಶುಲ್ಕವನ್ನು ಘೋಷಿಸಿತು. ಗಮನಾರ್ಹವಾಗಿ, ಭಾರತೀಯ ಟೆಕ್ ವೃತ್ತಿಪರರು ಶೇಕಡಾ 70 ಕ್ಕಿಂತ ಹೆಚ್ಚು H-1B ಗಳಲ್ಲಿ ಹೆಚ್ಚಿನ ಭಾಗವನ್ನು ಹೊಂದಿದ್ದಾರೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಹೆಚ್ ಯುಎಲ್, ನೆಸ್ಲೆ, ಎನ್ ಟಿಪಿಸಿ, ಜೆಎಸ್ ಡಬಲ್ಯೂ ಸ್ಟೀಲ್, ಪವರ್ ಗ್ರಿಡ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಟಾಟಾ ಮೋಟಾರ್ಸ್, ಟೆಕ್ ಮಹೀಂದ್ರಾ, ಭಾರತ್ ಎಲೆಕ್ಟ್ರಾನಿಕ್ಸ್ ಮತ್ತು ಹೀರೋ ಮೋಟೋಕಾರ್ಪ್ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.