ನವದೆಹಲಿ: ಎಲ್‌ಪಿಜಿ ಸಿಲಿಂಡರ್‌ಗಳ ವಿತರಣೆಯಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಲು ಕೇಂದ್ರ ಸರ್ಕಾರ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಲ್ಲಿ(ಒಎಂಸಿ) ಏಕೀಕೃತ LPG ವಿತರಣಾ ವ್ಯವಸ್ಥೆ ಜಾರಿಗೆ ಸಜ್ಜಾಗಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ(ಪಿಎನ್‌ಜಿಆರ್‌ಬಿ) ಹೊಸ ಎಲ್‌ಪಿಜಿ ಇಂಟರ್‌ಆಪರೇಬಲ್ ಸರ್ವಿಸ್ ಡೆಲಿವರಿ ಫ್ರೇಮ್‌ವರ್ಕ್ ಕುರಿತು ಗ್ರಾಹಕರಿಂದ ಅಭಿಪ್ರಾಯ ಪಡೆಯಲು ಆರಂಭಿಸಿದೆ. ಇದು ಸಿಲಿಂಡರ್ ವಿತರಣೆಯಲ್ಲಿ ವಿಳಂಬದ ಕುರಿತು ದೀರ್ಘಕಾಲದ ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.
ಪ್ರಸ್ತಾವಿತ ಚೌಕಟ್ಟಿನ ಅಡಿಯಲ್ಲಿ, ಮೂರು ಸರ್ಕಾರಿ ಸ್ವಾಮ್ಯದ ವಿತರಕರು, ಇಂಡೇನ್(ಐಒಸಿ), ಭಾರತ್ ಗ್ಯಾಸ್(ಬಿಪಿಸಿಎಲ್) ಮತ್ತು ಎಚ್‌ಪಿ ಗ್ಯಾಸ್(ಎಚ್‌ಪಿಸಿಎಲ್) ಇನ್ನು ಮುಂದೆ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವುದಿಲ್ಲ. ಬದಲಾಗಿ, ಅವರು ಒಂದೇ ರಾಷ್ಟ್ರೀಯ ನೆಟ್‌ವರ್ಕ್‌ನ ಭಾಗವಾಗಿ ಕಾರ್ಯನಿರ್ವಹಿಸುತ್ತವೆ.
ಗ್ರಾಹಕರು ಬುಕ್ ಮಾಡಿದ ವಿತರಕರು, ನಿಗದಿತ ಅವಧಿಯೊಳಗೆ ಸಿಲಿಂಡರ್ ಅನ್ನು ಪೂರೈಸಲು ಸಾಧ್ಯವಾಗದಿದ್ದರೆ, ಆರ್ಡರ್ ಅನ್ನು ಸ್ವಯಂಚಾಲಿತವಾಗಿ ಇತರ ಯಾವುದೇ ಹತ್ತಿರದ ಪಿಎಸ್‌ಯು ಕಂಪನಿಯ ಡೀಲರ್‌ಗೆ ಸಿಲಿಂಡರ್ ವಿತರಣೆಯ ಜವಾಬ್ದಾರಿ ನೀಡುತ್ತದೆ.
ಈ ವೇದಿಕೆ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸುತ್ತದೆ. ಕಂಪನಿಗಳು ತಮ್ಮ ಸೇವೆಯನ್ನು ಸುಧಾರಿಸುವಂತೆ ಮಾಡಲು ಸಹಾಯ ಮಾಡುತ್ತದೆ. ಈ ಹಂತವು ಅನಿಲ ಪೂರೈಕೆದಾರರ ಅನಿಯಂತ್ರಿತತೆ ಮತ್ತು ವಿತರಣಾ ವಿಳಂಬದಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.