ಮುಂಬೈ: ವಿಮಾನಯಾನ ನಿಯಂತ್ರಕ ಡಿಜಿಸಿಎ, ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(NMIA)ಕ್ಕೆ ಏರೋಡ್ರೋಮ್ ಪರವಾನಗಿ ನೀಡಿದೆ. NMIA ಮುಂಬೈ ಮಹಾನಗರ ಪ್ರದೇಶದ ಎರಡನೇ ವಿಮಾನ ನಿಲ್ದಾಣವಾಗಲಿದೆ.
"ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(NMIA)ವು, ನಾಗರಿಕ ವಿಮಾನಯಾನ ನಿರ್ದೇಶನಾಲಯ(DGCA)ದಿಂದ ಏರೋಡ್ರೋಮ್ ಪರವಾನಗಿ ಪಡೆಯುವುದರೊಂದಿಗೆ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಹೆಚ್ಚು ಸುರಕ್ಷತೆ ಮತ್ತು ನಿಯಂತ್ರಕ ಅವಶ್ಯಕತೆಗಳನ್ನು ಪೂರೈಸಿದ ನಂತರ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಅತ್ಯಗತ್ಯವಾಗಿ ಬೇಕಾದ ಲೈಸೆನ್ಸ್ ಸಿಕ್ಕಿದೆ" ಎಂದು ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್(NMIAL) ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.
"ಈ ಸಾಧನೆಯು NMIA ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರುವತ್ತ ಸಾಗುತ್ತಿರುವ ಪ್ರಗತಿಯಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. NMIA ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಸಂಪರ್ಕವನ್ನು ಹೆಚ್ಚಿಸುವ ಮತ್ತು ನವಿ ಮುಂಬೈಯನ್ನು ಪ್ರಪಂಚದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವ ಆಧುನಿಕ ಗೇಟ್‌ವೇಯನ್ನು ಸ್ಥಾಪಿಸುವ ತನ್ನ ದೃಷ್ಟಿಕೋನಕ್ಕೆ ಹತ್ತಿರವಾಗುತ್ತಿದೆ" ಎಂದು ಅದು ಹೇಳಿದೆ.
ಈ ವಿಮಾನ ನಿಲ್ದಾಣವು ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್(AAHL) ಮತ್ತು ಮಹಾರಾಷ್ಟ್ರದ ನಗರ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮ(CIDCO) ನಡುವಿನ 74:26 ಜಂಟಿ ಉದ್ಯಮವಾಗಿದೆ.