ಸ್ಯಾನ್ ಫ್ರಾನ್ಸಿಸ್ಕೊ: ಈಗಾಗಲೇ 14,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿರುವ ಜಾಗತಿಕ ಇ-ಕಾಮರ್ಸ್ ದೈತ್ಯ ಅಮೆಜಾನ್ ಇದೀಗ ತನ್ನ ಉದ್ಯೋಗಿಗಳಿಗೆ ಮತ್ತೊಂದು ಶಾಕ್ ನೀಡಿದೆ.
ಅಕ್ಟೋಬರ್‌ನಲ್ಲಿ ಘೋಷಿಸಲಾದ ಪುನರ್ರಚನೆಯ ಭಾಗವಾಗಿ ವಿಶ್ವಾದ್ಯಂತ 16,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಅಮೆಜಾನ್ ಬುಧವಾರ ತಿಳಿಸಿದೆ.
ಈ ಉದ್ಯೋಗ ಕಡಿತವು "ಶ್ರೇಣಿಗಳನ್ನು ಕಡಿಮೆ ಮಾಡುವುದು, ಮಾಲೀಕತ್ವವನ್ನು ಹೆಚ್ಚಿಸುವುದು ಮತ್ತು ಅಧಿಕಾರಶಾಹಿಯನ್ನು ತೆಗೆದುಹಾಕುವ" ಗುರಿ ಹೊಂದಿದೆ ಎಂದು ಕಂಪನಿಯ ಹಿರಿಯ ಉಪಾಧ್ಯಕ್ಷ ಬೆತ್ ಗ್ಯಾಲೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್‌ನಲ್ಲಿ ಮಾಧ್ಯಮ ವರದಿಗಳ ಪ್ರಕಾರ, ಒಟ್ಟು ಯೋಜಿತ 30,000 ಉದ್ಯೋಗ ಕಡಿತವು ಅಮೆಜಾನ್‌ನಲ್ಲಿನ 350,000 ಕಚೇರಿ ಉದ್ಯೋಗಗಳಲ್ಲಿ ಸುಮಾರು ಶೇ. 10 ಕಡಿತವಾಗಿತ್ತು. ಆ ಸಮಯದಲ್ಲಿ ಕಂಪನಿಯು, ವರದಿಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿತ್ತು. ಏಕೆಂದರೆ ಅದು 'ಕೃತಕ ಬುದ್ಧಿಮತ್ತೆ' ಅಥವಾ ಎಐ ತಂತ್ರಜ್ಞಾನದ ಏಳಿಗೆಯನ್ನು ಉಲ್ಲೇಖಿಸಿತ್ತು. ಎಐ ತಂತ್ರಜ್ಞಾನವು ಇಂಟರ್ನೆಟ್ ನಂತರದ ಅತಿದೊಡ್ಡ ಬದಲಾವಣೆಯಾಗಿದ್ದು, ಕಂಪನಿಗಳು ವೇಗವಾಗಿ ಕೆಲಸ ಮಾಡಲು ಇದು ನೆರವಾಗುತ್ತಿದೆ ಎಂದು ಹೇಳಿತ್ತು.
ಅಮೆಜಾನ್ ಇಂದಿನ ಉದ್ಯೋಗ ಕಡಿತದ ಬಗ್ಗೆ ಯಾವುದೇ ವಿವರವನ್ನು ನೀಡಿಲ್ಲ, "ಪ್ರತಿ ತಂಡವು ಮಾಲೀಕತ್ವ, ವೇಗ ಮತ್ತು ಗ್ರಾಹಕರಿಗೆ ಆವಿಷ್ಕಾರ ಮಾಡುವ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುವುದನ್ನು ಮುಂದುವರಿಸುತ್ತದೆ ಮತ್ತು ಸೂಕ್ತವಾದ ಹೊಂದಾಣಿಕೆಗಳನ್ನು ಮಾಡುತ್ತದೆ" ಎಂದು ಮಾತ್ರ ಹೇಳಿದೆ.