ಬೆಂಗಳೂರು: ದೀಪಾವಳಿ ಹಬ್ಬದ ವೇಳೆ ರಾಜ್ಯ ಸರ್ಕಾರ ಹಾಲಿನ ದರ ಏರಿಕೆ ಮಾಡಿದೆ. ಇದರ ನಡುವೆಯೇ ಮತ್ತೊಂದು ದರ ಏರಿಕೆಯ ಬಿಸಿ ಎದುರಾಗಿದೆ. ಹೌದು, ದೀಪಾವಳಿ ಮತ್ತು ಧನ್ ತೇರಸ್ ಹಬ್ಬದ ಸಂದರ್ಭದಲ್ಲೇ ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದೆ. ನವೆಂಬರ್ 1, 2026 ರಿಂದ ಜಾರಿಗೆ ಬರುವಂತೆ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಪ್ರತಿ ಸಿಲಿಂಡರ್‌ಗೆ ₹10 ರಿಂದ ₹17 ರವರೆಗೆ ಹೆಚ್ಚಳ ಮಾಡಲಾಗಿದೆ. ಆ ಕುರಿತ ವರದಿ ಇಲ್ಲಿದೆ:
ಕಳೆದ ಮೂರು ತಿಂಗಳಿಂದ ಸತತವಾಗಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಏರಿಕೆಯಾಗುತ್ತಿದ್ದು, ಹಬ್ಬದ ದಿನಗಳಲ್ಲಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಕ್ಯಾಟರಿಂಗ್ ಉದ್ಯಮಗಳ ಮೇಲಿನ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸೌದಿ ಅರಾಮ್ಕೊ ಸಂಸ್ಥೆಯು ಪ್ರೊಪೇನ್ ಮತ್ತು ಬ್ಯುಟೇನ್ ದರಗಳನ್ನು ಹೆಚ್ಚಿಸಿರುವುದು ಹಾಗೂ ಜಾಗತಿಕ ವಿದ್ಯಮಾನಗಳು ಈ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.
ಪ್ರಮುಖ ನಗರಗಳಲ್ಲಿ ಇಂದಿನ ಹೊಸ ವಾಣಿಜ್ಯ ಸಿಲಿಂಡರ್ ದರಗಳು:
ಬೆಂಗಳೂರು: ₹2,908 (₹10 ಏರಿಕೆ)
ದೆಹಲಿ: ₹2,820 (₹10 ಏರಿಕೆ)
ಮುಂಬೈ: ₹2,775 (₹10.50 ಏರಿಕೆ)
ಕೋಲ್ಕತಾ: ₹2,971 (₹17 ಏರಿಕೆ)
ಚೆನ್ನೈ: ₹2,994.50 (₹11.50 ಏರಿಕೆ)
ಗೃಹಬಳಕೆದಾರರಿಗೆ ನಿರಾಳ:
ಮತ್ತೊಂದೆಡೆ, ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಏರಿಕೆಯಾಗಿದ್ದರೂ, ಮನೆಗಳಲ್ಲಿ ಬಳಸುವ 14.2 ಕೆಜಿ ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಸತತ ಆರನೇ ತಿಂಗಳೂ ಗೃಹಬಳಕೆ ಸಿಲಿಂಡರ್ ದರ ಸ್ಥಿರವಾಗಿ ಕಾಯ್ದುಕೊಂಡಿರುವುದು ಸಾಮಾನ್ಯ ಜನರಿಗೆ ಸಮಾಧಾನ ತಂದಿದೆ. ಇದರೊಂದಿಗೆ ವಿಮಾನ ಇಂಧನ ದರದಲ್ಲೂ ಪ್ರತಿ ಲೀಟರ್‌ಗೆ ₹1.37 ರಷ್ಟು ಹೆಚ್ಚಳವಾಗಿದೆ.