ಮುಂಬೈ: ಕಳೆದ ವಾರ ಭಾರಿ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಇಂದು ವಾರದ 2ನೇ ದಿನವೂ ತನ್ನ ಏರಿಕೆ ನಾಗಾಲೋಟ ಮುಂದುವರೆಸಿದೆ.
ಮಂಗಳವಾರ ಭಾರತೀಯ ಷೇರುಮಾರುಕಟ್ಟೆ ಭಾರಿ ಏರಿಕೆ ಕಂಡಿದ್ದು, ಷೇರುಮಾರುಕಟ್ಟೆಯ ಉಭಯ ಸೂಚ್ಯಂಕಗಳಾದ ನಿಫ್ಟಿ ಮತ್ತು ಸೆನ್ಸೆಕ್ಸ್ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಬರೊಬ್ಬರಿ ಶೇ.1.62ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.1.58ರಷ್ಟು ಏರಿಕೆ ದಾಖಲಿಸಿದೆ.
ಸೆನ್ಸೆಕ್ಸ್ ಇಂದು ಬರೊಬ್ಬರಿ 1,225.07ಅಂಕಗಳ ಏರಿಕೆಯೊಂದಿಗೆ 76,917.85 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 370.05 ಅಂಕಗಳ ಏರಿಕೆಯೊಂದಿಗೆ 23,810.85 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಹಿಂದೂಸ್ತಾನ್ ಯೂನಿಲಿವರ್, ಭಾರ್ತಿ ಏರ್‌ಟೆಲ್, ಎಚ್‌ಡಿಎಫ್‌ಸಿ ಬ್ಯಾಂಕ್, ಏಷ್ಯನ್ ಪೇಂಟ್ಸ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಐಸಿಐಸಿಐ ಬ್ಯಾಂಕ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ.
ಅಂತೆಯೇ ಪವರ್ ಗ್ರಿಡ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎನ್‌ಟಿಪಿಸಿ, ಟಾಟಾ ಸ್ಟೀಲ್ ಮತ್ತು ಟ್ರೆಂಟ್ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.
ಬಿಎಸ್‌ಇ ಮಿಡ್‌ಕ್ಯಾಪ್ ಸೆಲೆಕ್ಟ್ ಸೂಚ್ಯಂಕ ಶೇ. 0.87ರಷ್ಟು ಏರಿಕೆ ಕಂಡರೆ, ಸ್ಮಾಲ್‌ಕ್ಯಾಪ್ ಸೆಲೆಕ್ಟ್ ಸೂಚ್ಯಂಕ ಶೇ. 0.60ರಷ್ಟು ಹೆಚ್ಚಳ ದಾಖಲಿಸಿದೆ.
ಬಿಎಸ್‌ಇ ವಲಯವಾರು ಸೂಚ್ಯಂಕಗಳ ಪೈಕಿ ಎಫ್‌ಎಂಸಿಜಿ ವಲಯ ಶೇ. 3.38ರಷ್ಟು ಭರ್ಜರಿ ಏರಿಕೆ ಕಂಡಿದೆ. ರಿಯಾಲ್ಟಿ ಶೇ. 2.33, ಟಾಪ್ 10 ಬ್ಯಾಂಕ್ಸ್ ಶೇ. 1.92, ಹಣಕಾಸು ಸೇವೆಗಳು ಶೇ. 1.67, ಆಟೊಮೊಬೈಲ್ ಶೇ. 1.64 ಹಾಗೂ ಕನ್ಸೂಮರ್ ಡಿಸ್ಕ್ರೆಷನರಿ ವಲಯ ಶೇ. 1.30ರಷ್ಟು ಏರಿಕೆ ದಾಖಲಿಸಿವೆ.
ಇನ್ನೊಂದೆಡೆ, ಯುಟಿಲಿಟೀಸ್ ಮತ್ತು ವಿದ್ಯುತ್ ವಲಯದ ಷೇರುಗಳು ಕುಸಿತ ಕಂಡಿವೆ.