ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್‌ಗೆ ಬರುವ ಬ್ಯಾಂಕ್ ಮೆಸೇಜ್ ನೋಡಿ ನಿಮ್ಮ ಎದೆ ಝಲ್ ಎಂದಿದೆಯಾ? ನೀವು ಯಾವುದೇ ವಹಿವಾಟು ನಡೆಸದಿದ್ದರೂ ಖಾತೆಯಿಂದ ಏಕಾಏಕಿ ಹಣ ಕಡಿತವಾಗಿರುವುದು ಕಂಡು ಶಾಕ್ ಆಗಿದ್ದೀರಾ? ಎಸ್‌ಎಂಎಸ್ ಶುಲ್ಕ, ಕನಿಷ್ಠ ಬ್ಯಾಲೆನ್ಸ್ ಅಥವಾ ನಿರ್ವಹಣಾ ವೆಚ್ಚದ ಹೆಸರಿನಲ್ಲಿ ಬ್ಯಾಂಕ್‌ಗಳು ಮಾಡುವ ಇಂತಹ ಕಡಿತಗಳಿಗೆ ಸುಮ್ಮನೆ ತಲೆಕೆಡಿಸಿಕೊಳ್ಳಬೇಕಿಲ್ಲ. ಆರ್‌ಬಿಐ ನಿಯಮಗಳ ಪ್ರಕಾರ, ಕಾರಣವಿಲ್ಲದೆ ಕಡಿತಗೊಂಡ ಪ್ರತಿಯೊಂದು ರೂಪಾಯಿಯನ್ನು ಮರಳಿ ಪಡೆಯುವ ಪೂರ್ಣ ಹಕ್ಕು ನಿಮಗಿದೆ. ನಿಮ್ಮ ಹಣವನ್ನು ಸುರಕ್ಷಿತವಾಗಿ ವಾಪಸ್ ಪಡೆಯಲು ತಕ್ಷಣವೇ ಮಾಡಬೇಕಾದ ಆ ಪ್ರಮುಖ ಹೆಜ್ಜೆಗಳು ಇಲ್ಲಿವೆ.
ಕಡಿತದ ವಿವರಗಳನ್ನು ಪರಿಶೀಲಿಸಿ:
ಮೊದಲು ನಿಮ್ಮ ಬ್ಯಾಂಕ್ ಪಾಸ್‌ಬುಕ್ ಅಪ್‌ಡೇಟ್ ಮಾಡಿ ಅಥವಾ ಇ-ಸ್ಟೇಟ್‌ಮೆಂಟ್ ಡೌನ್‌ಲೋಡ್ ಮಾಡಿ. ಇದಾದ ನಂತರ ಹಣ ಯಾವ ಕಾರಣಕ್ಕಾಗಿ ಕಡಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ (ಉದಾಹರಣೆಗೆ: ಎಸ್‌ಎಂಎಸ್ ಶುಲ್ಕ, ಕನಿಷ್ಠ ಬ್ಯಾಲೆನ್ಸ್ ಇಲ್ಲದಿರುವುದು ಅಥವಾ ಇತರೆ ವಹಿವಾಟು). ಈ ವೇಳೆ ಹಣ ಕಟ್ ಆದ ದಿನಾಂಕ, ಸಮಯ ಮತ್ತು ನಿಖರವಾದ ಮೊತ್ತವನ್ನು ನೋಟ್ ಮಾಡಿಟ್ಟುಕೊಳ್ಳಿ.
ತಕ್ಷಣ ಬ್ಯಾಂಕ್ ಕಸ್ಟಮರ್ ಕೇರ್ ಗೆ ದೂರು ನೀಡಿ
ಹಣ ಕಟ್ ಆದ ತಕ್ಷಣವೇ ನಿಮ್ಮ ಬ್ಯಾಂಕ್‌ನ ಅಧಿಕೃತ ಟೋಲ್-ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಿ. ಕಸ್ಟಮರ್ ಕೇರ್ ಪ್ರತಿನಿಧಿಯಿಂದ ನಿಮ್ಮ ದೂರನ್ನು ನೋಂದಾಯಿಸಿಕೊಂಡು, ದೂರು ಸಂಖ್ಯೆ ಅನ್ನು ಕಡ್ಡಾಯವಾಗಿ ಪಡೆದುಕೊಳ್ಳಿ. ಯಾಕಂದ್ರೆ, ಮುಂದಿನ ಫಾಲೋ-ಅಪ್‌ಗೆ ಇದು ಅತ್ಯಂತ ಅಗತ್ಯ.
ಬ್ಯಾಂಕ್ ಶಾಖೆಗೆ ಲಿಖಿತ ದೂರು ಸಲ್ಲಿಸಿ
ಫೋನ್ ದೂರಿನ ನಂತರವೂ ಸಮಸ್ಯೆ ಬಗೆಹರಿಯದಿದ್ದರೆ, ನಿಮ್ಮ ಹೋಮ್ ಬ್ರಾಂಚ್‌ಗೆ ಭೇಟಿ ನೀಡಿ. ಈ ವೇಳೆ ಬ್ಯಾಂಕ್ ಮ್ಯಾನೇಜರ್‌ಗೆ ಒಂದು ಲಿಖಿತ ದೂರು ಪತ್ರ ನೀಡಿ. ಅದರಲ್ಲಿ ನಿಮ್ಮ ಖಾತೆ ಸಂಖ್ಯೆ, ಕಡಿತವಾದ ಮೊತ್ತ ಮತ್ತು ಅದಕ್ಕೆ ಸೂಕ್ತ ಕಾರಣವಿಲ್ಲದಿರುವುದನ್ನು ಸ್ಪಷ್ಟವಾಗಿ ನಮೂದಿಸಿ. ಜೊತೆಗೆ, ಪತ್ರದ ಒಂದು ನಕಲು ಪ್ರತಿಯನ್ನು ಬ್ಯಾಂಕ್‌ನಿಂದ ಸೀಲ್ ಮತ್ತು ಸಹಿ ಮಾಡಿಸಿ ನಿಮ್ಮ ಬಳಿ ಇಟ್ಟುಕೊಳ್ಳಿ.
ಬ್ಯಾಂಕಿಂಗ್ ಓಂಬುಡ್ಸ್‌ಮನ್ ಮೊರೆ ಹೋಗಿ
ಬ್ಯಾಂಕ್‌ಗೆ ದೂರು ನೀಡಿ 30 ದಿನಗಳು ಕಳೆದರೂ ಯಾವುದೇ ಪ್ರತಿಕ್ರಿಯೆ ಬರದಿದ್ದರೆ ಅಥವಾ ಬ್ಯಾಂಕ್ ನೀಡಿದ ಉತ್ತರ ತೃಪ್ತಿಕರ ಇಲ್ಲದಿದ್ದರೆ, ನೀವು ನೇರವಾಗಿ ಆರ್‌ಬಿಐನ ಬ್ಯಾಂಕಿಂಗ್ ಓಂಬುಡ್ಸ್‌ಮನ್‌ಗೆ ದೂರು ನೀಡಬಹುದು. ಇದು ಆರ್‌ಬಿಐನ ಉಚಿತ ಗ್ರಾಹಕ ವೇದಿಕೆಯಾಗಿದ್ದು, ಆನ್‌ಲೈನ್ ಮೂಲಕ ಅಥವಾ ಇಮೇಲ್/ಪತ್ರದ ಮೂಲಕ ನಿಮ್ಮ ದೂರನ್ನು ದಾಖಲಿಸಬಹುದು. ಬ್ಯಾಂಕ್ ತಪ್ಪು ಮಾಡಿದ್ದರೆ ಓಂಬುಡ್ಸ್‌ಮನ್ ದಂಡ ಸಹಿತ ನಿಮ್ಮ ಹಣವನ್ನು ಮರಳಿ ಕೊಡಿಸುತ್ತಾರೆ.
ಒಂದು ವೇಳೆ ನಿಮ್ಮ ಗಮನಕ್ಕೆ ಬಾರದೆ ಯಾವುದಾದರೂ ಸೈಬರ್ ವಂಚನೆಯಿಂದ ಹಣ ಕಡಿತವಾಗಿದ್ದರೆ, 3 ದಿನಗಳ ಒಳಗಾಗಿ ಬ್ಯಾಂಕ್‌ಗೆ ಮಾಹಿತಿ ನೀಡಿದರೆ ಆರ್‌ಬಿಐ ನಿಯಮದ ಪ್ರಕಾರ ಗ್ರಾಹಕರಿಗೆ ಯಾವುದೇ ನಷ್ಟವಾಗುವುದಿಲ್ಲ, ಸಂಪೂರ್ಣ ಹಣ ಬ್ಯಾಂಕ್ ಭರಿಸಬೇಕಾಗುತ್ತದೆ. ಜೊತೆಗೆ, ಬ್ಯಾಂಕ್‌ನಿಂದ ಯಾವುದೇ ಒಟಿಪಿ ಅಥವಾ ಪಿನ್ ಕೇಳುವ ಕರೆಗಳಿಗೆ ಪ್ರತಿಕ್ರಿಯಿಸಬೇಡಿ.