ಮುಂಬೈ: ನಟ ಸಲ್ಮಾನ್ ಖಾನ್ಗಿಂತ ಶಾರುಖ್ ಖಾನ್ ಅವರೇ ಉತ್ತಮ ಎಂದು ನಟ ಸೋನು ಸೂದ್ ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಸೋನು ಸೂದ್, ನನ್ನ ವೃತ್ತಿ ಜೀವನದಲ್ಲಿ ನಾನು ಈ ವರೆಗೂ ಕಂಡ ನಟರ ಪೈಕಿ ಶಾರುಖ್ ಶ್ರೇಷ್ಟ ನಟ ಎಂದು ಹೇಳಿದ್ದಾರೆ.
'ಹ್ಯಾಪಿ ನ್ಯೂಯಿಯರ್ ಚಿತ್ರದ ನಿರ್ಮಾಪಕ ಕೂಡ ಆಗಿರುವ ಶಾರುಖ್ ಎಂದೂ ಕೂಡ ತಾವೊಬ್ಬ ನಿರ್ಮಾಪಕ ಗತ್ತನ್ನು ಪ್ರದರ್ಶಿಸಲಿಲ್ಲ. ಓರ್ವ ಉತ್ತಮ ಸಹ ನಟರಾಗಿ ಶಾರುಖ್ ತಮ್ಮೊಂದಿಗಿದ್ದರು. ಚಿತ್ರರಂಗದ ಸೂಪರ್ ಸ್ಟಾರ್ ಆಗಿದ್ದೂ ಕೂಡ, ನಟನೆಯ ಬಗ್ಗೆ ಅವರಿಗಿರುವ ಶ್ರದ್ಧೆ ನಮ್ಮಂತಹ ನಟರಿಗೆ ಮಾದರಿ. ಚಿತ್ರೀಕರಣದ ವೇಳೆ ಇಂದಿಗೂ ಶಾರುಖ್ ತಾವು ಮೊದಲನೇ ಚಿತ್ರದಲ್ಲಿ ನಟಿಸುತ್ತಿರುವಂತೆ ಸದಾಕಾಲ ಚಟುವಟಿಕೆಯಿಂದ ಇರುತ್ತಾರೆ. ಓರ್ವ ನಟ ತನ್ನ ಮೊದಲನೇ ಚಿತ್ರದಲ್ಲಿ ತೋರುವ ಶ್ರದ್ಧೆ ಮತ್ತು ಆಸಕ್ತಿಯನ್ನು ಶಾರುಖ್ ತಮ್ಮ ಪ್ರತಿ ಚಿತ್ರದಲ್ಲಿಯೂ ತೋರುತ್ತಾರೆ ಎಂದು ಸೋನು ಸೂದ್ ಹೇಳಿದರು.
'ದಬಂಗ್' ನೋಡಿ ಮೆಚ್ಚಿದ್ದ ಶಾರುಖ್
ಇದೇ ವೇಳೆ 2010ರಲ್ಲಿ ತೆರೆಕಂಡು ಭರ್ಜರಿ ಯಶಸ್ಸು ಗಳಿಸಿದ್ದ ಸಲ್ಮಾನ್ ಖಾನ್ ಮತ್ತು ತಮ್ಮ ನಟನೆಯ 'ದಬಂಗ್' ಚಿತ್ರವನ್ನು ವೀಕ್ಷಿಸಿದ್ದ ಶಾರುಖ್, ಕೂಡಲೇ ತಮಗೆ ಫೋನಾಯಿಸಿ ಚಿತ್ರದಲ್ಲಿನ ತಮ್ಮ ಪಾತ್ರವನ್ನು ಶ್ಲಾಘಿಸಿದ್ದರು ಎಂದು ಸೋನು ಸೂದ್ ಹೇಳಿದ್ದಾರೆ. 'ಚಿತ್ರದಲ್ಲಿ ನಟಿಸುವ ಉದ್ದೇಶದಿಂದ ನಾನು ನನ್ನ ಪಂಜಾಬ್ ರಾಜ್ಯವನ್ನು ತ್ಯಜಿಸಿ ಮುಂಬೈಗೆ ಬಂದಾಗ ಸಿಕ್ಕ ಮೊದಲ ಚಿತ್ರದಲ್ಲಿ ಸಾಕಷ್ಟು ಮುತುವರ್ಜಿ ವಹಿಸಿ, ಯಾವುದೇ ರೀತಿಯ ತಪ್ಪಾಗಬಾರದು ಎಂದು ನಟಿಸಿದ್ದೆ.
ಅಂತಹುದೇ ಮನಸ್ಥಿತಿಯಲ್ಲಿ ಶಾರುಖ್ ಖಾನ್ ಅವರು ಇಂದಿಗೂ ನಟಿಸುತ್ತಿದ್ದಾರೆ. ಚಿತ್ರೀಕರಣಕ್ಕೂ ಮೊದಲು ಸಾಕಷ್ಟು ಬಾರಿ ರಿಹರ್ಸಲ್ ಮಾಡಿರುತ್ತಾರೆ. ಆದರೂ ಯಾವುದೇ ತಪ್ಪಾಗ ಬಾರದು ಎಂದು ಮತ್ತೊಮ್ಮೆ ರಿಹರ್ಸಲ್ ಮಾಡೋಣ ಎಂದು ಕೇಳುತ್ತಾರೆ. ಸಾಕಷ್ಟು ಬಾರಿ ನಾನು ಇಷ್ಟು ಕಷ್ಟ ಪಡುವ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದ್ದೆ. ಪಾತ್ರ ನಿರ್ವಹಣೆಗಾಗಿ ಬೇಕಿದ್ದರೆ ಅವರು ಎಂಥಹುದೇ ಕಠಿಣ ಕೆಲಸವಿದ್ದರೂ ಸದಾ ಸಿದ್ಧರಿರುತ್ತಾರೆ. ಬಹುಶಃ ಅವರ ಈ ಕಠಿಣ ಪರಿಶ್ರಮವೇ ಅವರ ಇಂದಿನ ಸ್ಥಾನಕ್ಕೆ ಕಾರಣ ಎಂದು ನನಗನ್ನಿಸುತ್ತದೆ ಎಂದು ಸೋನು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಹ್ಯಾಪಿ ನ್ಯೂಯಿಯರ್ ನನ್ನ ವೃತ್ತಿ ಜೀವನದ ಪ್ರಮುಖ ತಿರುವು
ಸ್ಟಾರ್ಡಸ್ಟ್ ಮ್ಯಾಗಜಿನ್ನಲ್ಲಿ ತಮ್ಮ ಮುಖಪುಟವಿರುವ ಪ್ರತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಸೋನು ಸೂದ್, ಹ್ಯಾಪಿ ನ್ಯೂಯಿಯರ್ ಚಿತ್ರ ನನ್ನ ವೃತ್ತಿ ಜೀವನದ ಬಹಳ ಪ್ರಮುಖ ತಿರುವಾಗಲಿದೆ ಎಂದು ಭಾವಿಸಿದ್ದೇನೆ. ಚಿತ್ರ ಬಿಡುಗಡೆಗೊಂಡ ಬಳಿಕ ನನ್ನನ್ನು ಭೇಟಿ ಮಾಡಿದವರೆಲ್ಲರೂ ಕೂಡ ನನ್ನ ಪಾತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೆಲ ನಿರ್ಮಾಪಕರು ಕೂಡ ತನ್ನನ್ನು ಭೇಟಿಯಾಗಿದ್ದು, ಮುಂದಿನ ಚಿತ್ರಗಳ ಕುರಿತಂತೆ ಸಕಾರಾತ್ಮಕವಾಗಿ ಮಾತುಗಳನ್ನಾಡಿದ್ದಾರೆ ಎಂದು ಹೇಳಿದರು.
ಹ್ಯಾಪಿನ್ಯೂಯಿಯರ್ ಪೋಸ್ಟರ್ ನೋಡಿ ಶ್ಲಾಘಿಸಿದ್ದ ಸಲ್ಮಾನ್
ಇನ್ನು ಹ್ಯಾಪಿ ನ್ಯೂಯಿಯರ್ ಚಿತ್ರದಲ್ಲಿ ನನ್ನ ಪಾತ್ರ ಮತ್ತು ಪಾತ್ರಪೋಷಣೆ ಕುರಿತಂತೆ ನಟ ಸಲ್ಮಾನ್ ಖಾನ್ ಶ್ಲಾಘನೆ ವ್ಯಕ್ತಪಡಿಸಿದ್ದು, ಈ ಹಿಂದೆ ಚಿತ್ರದ ಪೋಸ್ಟರ್ಗಳು ಬಿಡುಗಡೆಯಾದಾಗ ಸ್ವತಃ ಸಲ್ಮಾನ್ ಖಾನ್ ಅವರೇ ನನಗೆ ದೂರವಾಣಿ ಕರೆಮಾಡಿ ಸಂತಸ ವ್ಯಕ್ತಪಡಿಸಿದ್ದರು. ಆದರೆ ಚಿತ್ರ ಬಿಡುಗಡೆಗೊಂಡ ಬಳಿಕ ನಾನು ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ ಎಂದು ಸೋನು ಸೂದ್ ಹೇಳಿದ್ದಾರೆ.
ಒಟ್ಟಾರೆ ಬಾಲಿವುಡ್ ನ ನಂಬರ್-1 ಪಟ್ಟಕ್ಕಾಗಿ ಖಾನ್ ತ್ರಯರ ನಡುವೆ ಮೊದಲಿನಿಂದಲೂ ಕಾದಾಟ ನಡೆಯುತ್ತಿದ್ದು, ಸಂದರ್ಭ ಸಿಕ್ಕಾಗಲೆಲ್ಲಾ ಒಬ್ಬರ ಕಾಲನ್ನು ಒಬ್ಬರು ಎಳೆಯಲು ಸದಾ ಸಿದ್ಧರಿರುತ್ತಾರೆ. ಅದರಲ್ಲಿಯೂ ಸಲ್ಮಾನ್ ಮತ್ತು ಶಾರುಖ್ ಪರಸ್ಪರ ಹಾವು-ಮುಂಗುಸಿಯಂತೆ ವರ್ತಿಸುತ್ತಾರೆ. ಇಫ್ತಾರ್ ಕೂಟದಲ್ಲಿ ಪರಸ್ಪರ ಆಲಂಗಿಸಿಕೊಂಡಿದ್ದನ್ನು ಬಿಟ್ಟರೆ, ಈ ಇಬ್ಬರು ಸೂಪರ್ ಸ್ಟಾರ್ಗಳ ಪರಸ್ಪರ ಮುಖಾಮುಖಿ ಭೇಟಿಯಾಗಿದ್ದು ತೀರ ಕಡಿಮೆ. ಇಂತಹ ಸಂದರ್ಭದಲ್ಲಿ ನಟ ಸೋನು ಸೂದ್ ಅವರ ಹೇಳಿಕೆ ಖಾನ್ ತ್ರಯರಲ್ಲಿ ಎಂತಹ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.