ಮುಂಬೈ: ಎರಡು ಸಲ ಮದುವೆಯಾಗಿ ಅದು ಮುರಿದು ಬಿದ್ದ ನಂತರ ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಇದೀಗ ಹೊಸ ಪ್ರೇಮಾನುರಾಗ ಶುರು ಮಾಡಿಕೊಂಡಿದ್ದಾರೆ ಎಂಬ ಗುಲ್ಲು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.
ಅನುರಾಗ್ ಕಶ್ಯಪ್ ಈ ಬಾರಿ ಕರ್ನಾಟಕ ಕರಾವಳಿ ಮೂಲದ 22 ವರ್ಷದ ಮುಂಬೈಯ ಸೈಂಟ್ ಕ್ಸೇವಿಯರ್ ಕಾಲೇಜಿನ ಯುವತಿ ಶುಭ್ರಾ ಶೆಟ್ಟಿ ಜತೆ ಡೇಟಿಂಗ್ ಮಾಡುತ್ತಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ. ಕಳೆದ ವರ್ಷ ಡಿಗ್ರಿ ಪೂರೈಸಿದ ಶುಭ್ರಾ ಶೆಟ್ಟಿ ಪ್ರಸ್ತುತ ಫ್ಯಾಂಟಮ್ ಫಿಲ್ಮ್ಸ್ ಸಂಸ್ಥೆಯಲ್ಲಿ ನೌಕರಿ ಮಾಡುತ್ತಿದ್ದಾರೆ.ಪ್ರಸ್ತುತ ಇವರಿಬ್ಬರು ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ಸುದ್ದಿ ಹರಡಿದೆ.
ಅಲ್ಲಗಳೆದ ಕಶ್ಯಪ್: ತಾವು ಶುಭ್ರಾ ಶೆಟ್ಟಿ ಜೊತೆ ಅನೇಕ ಪಾರ್ಟಿಗಳಲ್ಲಿ ತೆಗೆದಿರುವ ಫೋಟೋವನ್ನು ಅವರು ಇನ್ಟ್ಸಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಹೊಸ ಸುದ್ದಿ ಬಗ್ಗೆ ಮಾಧ್ಯಮದವರು ಅವರನ್ನು ಕೇಳಿದಾಗ, ತಾವು, ಶುಭ್ರಾ ಶೆಟ್ಟಿ ಮತ್ತು ಮತ್ತೊಬ್ಬ ಯುವತಿ ಇರುವ ಫೋಟೋವನ್ನು ಷೇರ್ ಮಾಡಿ, ಈ ಫೋಟೋವೇ ಎಲ್ಲ ಹೇಳುತ್ತದೆ. ನಾನೇನು ಹೇಳುವ ಅಗತ್ಯವಿಲ್ಲ ಎಂದು ಸಂದೇಶ ಕಳುಹಿಸಿದ್ದಾರೆ.