ನವದೆಹಲಿ: ಮೆಗಾಸ್ಟಾರ್ ಬಿಗ್ ಬಿ ಅಣ್ಣನ ಮಗಳೊಂದಿಗೆ ಬಾಲಿವುಡ್ ಖ್ಯಾತ ನಟ ಕುನಾಲ್ ಕಪೂರ್ ಮಂಗಳವಾರ ಮದುವೆಯಾಗಿದ್ದಾರೆ.
ಕಳೆದ 2 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದ ಈ ಜೋಡಿ ಬಿಗ್ ಬಿ ಅವರ ಸಲಹೆ ಮೇರೆಗೆ ಆಫ್ರಿಕಾದ ಸೀಶೆಲ್ಲೆಸ್‌ನಲ್ಲಿ ಖಾಸಗಿಯಾಗಿ ವಿವಾಹವಾಗಿದ್ದಾರೆ. ಈ ಸಮಾರಂಭಕ್ಕೆ ಆತ್ಮೀಯ ಸ್ನೇಹಿತರು, ಕುಟುಂಬಸ್ಥರು ಹಾಗೂ ಸಂಬಂಧಿಕರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಇನ್ನು ಕೆಲವೇ ದಿನಗಳಲ್ಲಿ ದೆಹಲಿಯಲ್ಲಿ ಆರತಕ್ಷತೆಯೊಂದನ್ನು ಆಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
ನೈನಾ ಅವರು ಅಮಿತಾಬ್ ಬಚ್ಚನ್ ಅವರ ಅಣ್ಣ ಅಜಿತಾಬ್ ಹಾಗೂ ರಮೋಲ್ ಬಚ್ಚನ್ ದಂಪತಿಯ ಮೂರನೆ ಮಗಳಾಗಿದ್ದಾರೆ. ಲಂಡನ್‌ನಲ್ಲಿ ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಆಗಿ ಕಾರ್ಯನಿರ್ವಹಿಸಿ ಅನುಭವ ಇರುವ ನೈನಾ ಬಚ್ಚನ್ ದೆಹಲಿಗೆ ಶಿಫ್ಟ್ ಆಗಿ ನಂತರ ನಾಟಕ ರಂಗದಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ನಾಟಕ ರಂಗದ ಪ್ರತಿಭೆಯಾಗಿ ಹೆಸರುವಾಸಿಯಾಗಿದ್ದ ಕುನಾಲ್ ಇವರಿಬ್ಬರಿಗೂ ಪ್ರೀತಿಯಾಗಿತ್ತು. ನಂತರದ ದಿನಗಳಲ್ಲಿ ಇಬ್ಬರೂ ಚಿತ್ರೋದ್ಯಮದ ಕಾರ್ಯಕ್ರಮಗಳಿಗೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಅವರೊಡನೆ ಇದ್ದ ಪ್ರೀತಿಯನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿರಲಿಲ್ಲ. ಮದುವೆಯ ಕುರಿತು ನಿರ್ಧಾರವನ್ನೂ ಕೈಗೊಂಡಿರಲಿಲ್ಲ. ಕೆಲವು ದಿನಗಳ ಹಿಂದಷ್ಟೇ ಅಮಿತಾಬ್ ಬಚ್ಚನ್ ಅವರ ಸಲಹೆ ಮೇರೆಗೆ ನಿಶ್ಚಿತಾರ್ಥವನ್ನು ನೆರವೇರಿಸಿಕೊಂಡಿದ್ದರು.
ಕುನಾಲ್ ಕಪೂರ್ ಈಗಾಗಲೇ ಅಮಿರ್ ಖಾನ್ ಅವರ ರಂಗ್ ದೇ ಬಸಂತಿ, ಲವ್ ಶುವ್ ತೆಯ್ ಚಿಕನ್ ಖುರಾನಾ, ಡಾನ್-2, ಬಚ್ಚಾ ಏ ಹಸೀನೊ ಚಿತ್ರಗಳಲ್ಲಿ ನಟಿಸಿದ್ದಾರೆ.