ಮುಂಬೈ: ಶೀರ್ಷಿಕೆ ಮತ್ತು ಸಿನೆಮಾದ ಕಥೆಯ ಬಗ್ಗೆ ಕೆಲವು ಧಾರ್ಮಿಕ ಸಂಸ್ಥೆಗಳು ನಟ ಸಲ್ಮಾನ್ ಖಾನ್ ಅವರ 'ಭಜರಂಗಿ ಭೈಜಾನ್' ಸಿನೆಮಾದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿರುವ ಈ ಸಂದರ್ಭದಲ್ಲಿ, ಸಿನೆಮಾದ ಬೆಂಬಲಕ್ಕೆ ನಿಂತಿರುವ ಬಿಜೆಪಿ ಸಂಸದ ನಟ ಶತ್ರುಘನ್ ಸಿನ್ಹ ಅವರು ಸಿನೆಮಾ ಬಗ್ಗೆ ದೂರುವುದಕ್ಕೂ ಮುಂಚೆ ಮೊದಲು ಸಿನೆಮಾ ನೋಡುವಂತೆ ಹೇಳಿದ್ದಾರೆ.
ನಿಯತಕಾಲಿಕೆಯೊಂದರೆ ಮುಖಪುಟ ಅನಾವರಣದ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಸಿನ್ಹ "ಸಿನೆಮಾ ನೋಡುವುದಕ್ಕೂ ಮುಂಚಿತವಾಗಿಯೇ ಈ ರೀತಿಯ ವ್ಯತಿರಿಕ್ತ ಪ್ರತಿಕ್ರಿಯೆಗಳನ್ನು ನೀಡದಂತೆ ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತೇನೆ. ಸಲ್ಮಾನ್ ಮತ್ತು ನಾನು ಇಬ್ಬರು ಒಳ್ಳೆಯ ಕುಟುಂಬ ಗೆಳೆಯರು. ಸಿನೆಮಾ ನೋಡದೆ ನೋಡಿ ಬಂದವನಂತೆ ಪ್ರತಿಭಟಿಸಲು ಹೇಗೆ ಸಾಧ್ಯ" ಎಂದಿದ್ದಾರೆ.
"ನನಗೆ ತಿಳಿದಿರುವಂತೆ 'ಭಜರಂಗಿ ಭೈಜಾನ್' ಒಳ್ಳೆಯ ಆರೋಗ್ಯಕರ ಕಮರ್ಶಿಯಲ್ ಸಿನೆಮಾ. ಇದು ಇತ್ತೀಚಿತ ದಿನಗಳ ಅತಿ ಹೆಚ್ಚು ಜಾತ್ಯಾತೀತ ಭಾವನೆ ಹೊಮ್ಮಿಸುವ ಸಿನೆಮ. ಇದು ಸಮಾಜವನ್ನು ಒಗ್ಗೂಡಿಸುತ್ತದೆ ಮತ್ತು ಹಲವಾರು ಜನ ಇದಕ್ಕೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ನ್ಯಾಯಯುತ ಅವಕಾಶ ನೀಡುವಂತೆ ನಾನು ಜನರಲ್ಲಿ ಬೇಡಿಕೊಳ್ಳುತ್ತೇನೆ. ಸಿನೆಮಾದಲ್ಲಿ ಏನಾದರು ತೊಂದರೆ ಇದ್ದಿದ್ದರೆ ಸೆನ್ಸಾರ್ ಮಂಡಲಿ ಅದಕ್ಕೆ ಪ್ರಮಾಣಪತ್ರ ನೀಡುತ್ತಿರಲಿಲ್ಲ" ಎಂದು ಅವರು ತಿಳಿಸಿದ್ದಾರೆ.
ಕಬೀರ್ ಖಾನ್ ನಿರ್ದೇಶನದ ಚಿತ್ರದ ಬಗ್ಗೆ ಹಲವಾರು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸುತ್ತಿರುವುದರಿಂದ ನಿಗದಿತ ಸಮಯಕ್ಕೆ ಸರಿಯಾಗಿ ಸಿನೆಮಾ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.