ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಮ್ ಖಾನ್ ಹಾಗೂ ನಿರ್ದೇಶಕ ಕಬೀರ್ ಖಾನ್ ಅವರು 'ಮಹಾಭಾರತ' ಧಾರಾವಾಹಿ ನಟ ಗಜೇಂದ್ರ ಚೌಹಾನ್ ಎಫ್ ಟಿ ಐ ಐ ವಿದ್ಯಾರ್ಥಿಗಳ ಪ್ರತಿಭಟನೆಗೆ ಓಗೊಟ್ಟು, ನಿರ್ದೇಶಕ ಸ್ಥಾನ ತೊರೆಯಬೇಕೆಂದು ಗುರುವಾರ ಹೇಳಿದ್ದಾರೆ.
ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ನಿರ್ದೇಶಕನ ಸ್ಥಾನಕ್ಕೆ ಬೇರೆ ವ್ಯಕ್ತಿಯನ್ನು ನೇಮಕ ಮಾಡುವಂತೆ ಸಂಸ್ಥೆಯ ವಿದ್ಯಾರ್ಥಿಗಳು ಕಳೆದ ಒಂದು ತಿಂಗಳಿನಿಂದ ನಿರಂತರ ಪ್ರತಿಭಟನೆ ನಡೆಸಿದ್ದಾರೆ. ಹಲವಾರು ಬಾಲಿವುಡ್ ತಾರೆಯರು ಈ ವಿಷಯದ ಬಗ್ಗೆ ಈಗಾಗಲೇ ಪ್ರತಿಕ್ರಿಯಿಸಿದ್ದು, ಕೆಲವರು ವಿದ್ಯಾರ್ಥಿಗಳ ಪರ ಮಾತನಾಡಿದ್ದಾರೆ.
"ಅವರು(ಚೌಹಾನ್) ವಿದ್ಯಾರ್ಥಿಗಳ ಮಾತು ಕೇಳಬೇಕು. ಏಕೆಂದರೆ ನಮ್ಮ ಉದ್ಯಮದ ಇಂದಿನ ಸ್ಥಿತಿಗೆ ಈ ಸಂಸ್ಥೆಯ ವಿದ್ಯಾರ್ಥಿಗಳ ಕೊಡುಗೆ ಅಪಾರವಾಗಿದೆ" ಎಂದು ತಮ್ಮ ಸಿನೆಮಾ 'ಭಜರಂಗಿ ಜಾಯಿಜಾನ್' ಸಿನೆಮಾದ ಕುರಿತ ಪುಸ್ತಕ ಅನಾವರಣದ ವೇಳೆ ಮಾಧ್ಯಮಗಳಿಗೆ ಸಲ್ಮಾನ್ ತಿಳಿಸಿದ್ದಾರೆ.
"ಈ ವಿಷಯದಲ್ಲಿ ವಿವಾದಕ್ಕೀಡಾಗಿರುವ ಧೀಮಂತ ವ್ಯಕ್ತಿ ಗೌರವದಿಂದ ಹಿಂದೆ ಸರಿಯುವುದೊಳಿತು" ಎಂದು ಕಬೀರ್ ಖಾನ್ ತಿಳಿಸಿದ್ದಾರೆ.
"ನಾನು ತಿಳಿದಂತೆ ಸಂಸ್ಥೆಯ ನಿರ್ದೇಶಕ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ಅತಿ ಮುಖ್ಯವಾದದ್ದು. ನೀವು ಗೌರವಕ್ಕೆ ಬೇಡಿಕೆಯಿಡಲು ಸಾಧ್ಯವಿಲ್ಲ ಅದನ್ನು ಸಂಪಾದಿಸಬೇಕು.
"ವಿದ್ಯಾರ್ಥಿಗಳನ್ನು ಹೊರದಬ್ಬುವುದು ಸರಿಯಲ್ಲ. ಅವರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಸರಿಯಲ್ಲ ಎಂದು ತಿಳಿದುದ್ದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತವಾಗಿದ್ದಾರೆ" ಎಂದು ಕಬೀರ್ ತಿಳಿಸಿದ್ದಾರೆ.
ಈ ಪ್ರಕರಣದ ಬಗ್ಗೆ ನನ್ನದು ಸರಳ ಅಭಿಪ್ರಾಯ ಎಂದಿರುವ ಸಲೀಮ್ ಖಾನ್ "ನನ್ನನ್ನು ಸ್ವಾಗತ ಮಾಡದ ಹೊರತು ನಾನು ಅಲ್ಲಿರಲು ಬಯಸುವುದಿಲ್ಲ. ನಾನು ಅಲ್ಲಿಗೆ ಹೋಗಲೂ ಇಚ್ಚಿಸುವುದಿಲ್ಲ. ನಿಮ್ಮ ಉಪಸ್ಥಿತಿ ಬೇಡವೆಂದು ಅಷ್ಟೂ ದೊಡ್ಡ ಪ್ರತಿಭಟನೆ ನಡೆಯುವಾಗ ಗೌರವದಿಂದ ದೂರ ಉಳಿಯುವುದು ಲೇಸು" ಎಂದು ಅವರು ತಿಳಸಿದ್ದಾರೆ.