ಮುಂಬೈ: ಹಿಟ್ ಅಂಡ್ ರನ್ ಪ್ರಕರಣದಲ್ಲಿ ಅಪರಾಧಿಯಾಗಿರುವ ನಟ ಸಲ್ಮಾನ್ ಖಾನ್ ಅವರ ಮುಂಬೈ ನಿವಾಸಕ್ಕೆ ನಟ ಶಾರುಖ್ ಭೇಟಿ ನೀಡಿ ಚರ್ಚೆ ನಡೆಸಿದರು.
ಸಲ್ಮಾನ್ ಖಾನ್ ಅವರ ವಿರುದ್ಧದ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಹೊರಬೀಳುವುದಕ್ಕೂ ಮೊದಲು ಅಂದರೆ ಕಳೆದ ತಡ ರಾತ್ರಿಯಲ್ಲಿ ನಟ ಶಾರುಖ್ ಖಾನ್ ಅವರು ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಮುಂಬೈನ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ನಲ್ಲಿರುವ ಸಲ್ಮಾನ್ ನಿವಾಸಕ್ಕೆ ನಟ ಶಾರುಖ್ ಮತ್ತು ಸಲ್ಮಾನ್ ಖಾನ್ ಅವರ ತಂಗಿ ಅರ್ಪಿತಾ ಖಾನ್ ಅವರು ಭೇಟಿ ನೀಡಿ ಚರ್ಚಿಸಿದರು.
ಸುಮಾರು ಅರ್ಧಗಂಟೆಗೂ ಅಧಿಕ ಕಾಲ ಇಬ್ಬರೂ ನಟರು ಚರ್ಚೆ ನಡೆಸಿದ್ದು, ಮೂಲಗಳ ಪ್ರಕಾರ ಚರ್ಚೆ ವೇಳೆ ನಟ ಶಾರುಖ್ ಸಲ್ಮಾನ್ ಖಾನ್ ಗೆ ಧೈರ್ಯ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ ಸಲ್ಮಾನ್ ಖಾನ್ ಸಹೋದರ ಸೊಹೇಲ್ ಖಾನ್ ಕೂಡ ಸಲ್ಮಾನ್ ಖಾನ್ ನಿವಾಸಕ್ಕೆ ಆಗಮಿಸಿ ಚರ್ಚೆ ನಡೆಸಿದ್ದರು.
ನಟ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರು ಪರಸ್ಪರ ಆತ್ಮೀಯ ಸ್ನೇಹಿತರಾಗಿದ್ದು, ಬಹಳ ವರ್ಷಗಳ ಹಿಂದೆ ಇವರ ನಡುವೆ ವಿರಸ ಮೂಡಿತ್ತು. ಆ ಬಳಿಕ ಒಬ್ಬರ ವಿರುದ್ಧ ಮತ್ತೊಬ್ಬರು ಟೀಕಾ ಪ್ರಹಾರಗಳನ್ನೇ ನಡೆಸುತ್ತಿದ್ದರು. ಇತ್ತೀಚೆಗೆ ನಡೆದ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಅವರ ವಿವಾಹದ ವೇಳೆ ಇಬ್ಬರ ನಡುವಿನ ವಿರಸಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಸಲಾಗಿತ್ತು. ಆಗ ಇಬ್ಬರೂ ಪರಸ್ಪರ ಆಲಂಗಿಸಿಕೊಳ್ಳುವ ಮೂಲಕ ತಮ್ಮ ನಡುವಿನ ವಿರಸಕ್ಕೆ ಮುಕ್ತಾಯ ಹಾಡಲು ಮುಂದಾಗಿದ್ದರು. ಇದಕ್ಕೂ ಮೊದಲು ರಂಜಾನ್ ಪ್ರಯುಕ್ತ ನಡೆಯುವ ಇಫ್ತಾರ್ ಔತಣಕೂಟದಲ್ಲಿಯೂ ಇಬ್ಬರು ಪರಸ್ಪರ ಎದುರುಗೊಂಡು ಆಲಂಗಿಸಿಕೊಂಡಿದ್ದರು.