ಮುಂಬೈ: ಸಂದರ್ಶನವೊಂದರಲ್ಲಿ ಅಸಹಿಷ್ಣುತೆ ಕುರಿತು ಹೇಳಿಕೆ ನೀಡಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಸೂಪರ್ ಸ್ಟಾರ್ ಶಾರುಖ್ ಖಾನ್ ಗೆ ಬಾಲಿವುಡ್ ನಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದಿ.ವಿಲಾಸ್ ರಾವ್ ದೇಶ್ ಮುಖ್ ಅವರ ಪುತ್ರ ಮತ್ತು ನಟ ರಿತೇಶ್ ದೇಶ್ ಮುಖ್, ಜೋಯಾ ಅಖ್ತರ್, ಸುಧೀರ್ ಮಿಶ್ರಾ ಸೇರಿದಂತೆ ಬಾಲಿವುಡ್ ನ ಹಲವು ಖ್ಯಾತನಾಮರು ಶಾರುಖ್ ಖಾನ್ ಅವರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ನಟ ರಿತೇಶ್ ದೇಶ್ ಮುಖ್, ಶಾರುಖ್ ಖಾನ್ ಕುರಿತು ಎದ್ದಿರುವ ಚರ್ಚೆ ನಿಜಕ್ಕೂ ದುರದೃಷ್ಟಕರ. ಕೆಲವು ಮಂದಿ ತಮ್ಮ ಸ್ವಾರ್ಥಸಾಧನೆಗಾಗಿ ಪ್ರಕರಣವನ್ನು ಸಮಸ್ಯೆ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹುದೇ ಅಭಿಪ್ರಾಯವನ್ನು ಸುಧೀರ್ ಮಿಶ್ರಾ ಅವರು, ಶಾರುಖ್ ದೊಡ್ಡ ನಟರಾಗಿದ್ದು, ಅವರ ಮಾತು ತೂಕವುಳ್ಳದ್ದಾಗಿರುತ್ತದೆ ಎಂದು ಹೇಳಿದ್ದಾರೆ. ನಿರ್ದೇಶಕ ಜೋಯಾ ಅಖ್ತರ್ ಅವರು ಕೂಡ ಶಾರುಖ್ ಗೆ ಬೆಂಬಲ ವ್ಯಕ್ತಪಡಿಸಿದ್ದು, ಶಾರುಖ್ ಖಾನ್ ಗೆ ತಮ್ಮ ಅಸ್ಥಿತ್ವ ರುಜುವಾತು ಪಡಿಸುವ ಅಗತ್ಯವಿಲ್ಲ. ಅವರಿಗೆ ಅವರದ್ದೇ ಆದ ದೊಡ್ಡ ಅಭಿಮಾನಿ ಬಳಗವಿದೆ ಎಂದು ಹೇಳಿದ್ದಾರೆ. ಇನ್ನು ನಟಿ ಇಷಾ ಗುಪ್ತಾ ಅವರು ಮಾತನಾಡಿ ಶಾರುಖ್ ಖಾನ್ ಭಾರತೀಯ ಚಿತ್ರೋಧ್ಯಮವನ್ನು ಅಂತಾರಾಷ್ಟ್ರೀಯವಾಗಿ ಪ್ರತಿನಿಧಿಸುವ ನಟರಾಗಿದ್ದು, ಅವರನ್ನು ಧಾರ್ಮಿಕ ಹಿನ್ನಲೆಯಲ್ಲಿ ನೋಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಮ್ಮ 50ನೇ ಜನ್ಮದಿನಾಚರಣೆಯ ವೇಳೆ ಖಾಸಗಿ ವಾಹಿನಿಗೆ ಸಂದರ್ಶನ ನೀಡಿದ್ದ ನಟ ಶಾರುಖ್ ಖಾನ್ ಅವರು, ದಾದ್ರಿ ಪ್ರಕರಣ ಮತ್ತು ವಿಚಾರವಾದಿಗಳ ಮೇಲಿನ ಹಲ್ಲೆಯನ್ನು ಉದ್ದೇಶಿಸಿ "ಭಾರತದಲ್ಲಿ ತೀವ್ರ ಅಸಹಿಷ್ಣುತೆ ಇದೆ ಎಂದು ಹೇಳಿದ್ದರು. ಶಾರುಖ್ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಬಿಜೆಪಿ ಮುಖಂಡರಾದ ಕೈಲಾಶ್ ವಿಜಯವರ್ಗೀಯ ಮತ್ತು ಯೋಗಿ ಅದಿತ್ಯಾನಾಥ್ ಅವರು ಶಾರುಖ್ ವಿರುದ್ಧ ಟೀಕಾ ಪ್ರಹಾರವನ್ನೇ ಮಾಡಿದ್ದರು.
ಆದರೆ ಬಿಜೆಪಿಯ ಮೈತ್ರಿ ಪಕ್ಷ ಶಿವಸೇನೆ ಸೇರಿದಂತೆ ಬಿಜೆಪಿಯ ಕೆಲ ಮುಖಂಡರು ಸೇರಿದಂತೆ ಕಾಂಗ್ರೆಸ್ ಪಕ್ಷ ಶಾರುಖ್ ಗೆ ಬೆಂಬಲ ವ್ಯಕ್ತಪಡಿಸಿದ್ದರು.