ಮುಂಬೈ: ಬಾಲಿವುಡ್ ನ ಖ್ಯಾತ ನಟಿ, ಬಚ್ಚನ್ ಸೊಸೆ ಐಶ್ವರ್ಯ ರೈ ಮತ್ತು ಇರ್ಫಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಜಸ್ಬಾ ಇಂದು ತೆರೆಗೆ ಬರುತ್ತಿದೆ. 2010ರಲ್ಲಿ ರಜನಿಕಾಂತ್ ಜೊತೆ ರೋಬೋಟ್ ಚಿತ್ರದಲ್ಲಿ ನಟಿಸಿದ ಮೇಲೆ ಮಗಳು ಆರಾಧ್ಯ ಹುಟ್ಟಿದ ನಂತರ ದೀರ್ಘ ಕಾಲದವರೆಗೆ ಐಶ್ವರ್ಯ ನಟನೆಗೆ ಬ್ರೇಕ್ ತೆಗೆದುಕೊಂಡಿದ್ದರು. ಹಾಗಾಗಿ ಇಂದಿನ ಜಸ್ಬಾ ಚಿತ್ರ ಅವರಿಗೆ ತುಂಬಾ ಮುಖ್ಯವಾಗಿದ್ದು, ಪ್ರೇಕ್ಷಕರೂ ಸಹ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಅವರು ಅನೇಕ ವಿಷಯಗಳ ಕುರಿತು ಮಾತನಾಡಿದ್ದಾರೆ. ಈ ಚಿತ್ರದಲ್ಲಿ ಮುಖ್ಯವಾದ ಮತ್ತು ಗಟ್ಟಿ ಕಥೆಯುಳ್ಳ ಸಾಮಾಜಿಕ ಸಂದೇಶವಿದೆ. ತಾಯ್ತನದ ಪಾತ್ರದಲ್ಲಿ ನನ್ನ ಅಭಿನಯ ಪ್ರಾಮಾಣಿಕವಾಗಿ ಮತ್ತು ನೈಜವಾಗಿ ಮೂಡಬಂದಿದೆ ಎಂದು ಚಿತ್ರದ ಟ್ರೈಲರ್ ನೋಡಿದವರು ಹೇಳಿದ್ದಾರೆ. ಇದೇ ಪಾತ್ರವನ್ನು 5 ವರ್ಷಗಳ ಹಿಂದೆ ಮಾಡುತ್ತಿದ್ದರೆ ಹೀಗೆ ಅಭಿನಯಿಸಲು ಸಾಧ್ಯವಾಗುತ್ತಿರಲಿಲ್ಲವೇನೋ, ಏಕೆಂದರೆ ಆಗ ನಾನು ನಿಜ ಬದುಕಿನಲ್ಲಿ ತಾಯಿಯಾಗಿರಲಿಲ್ಲ. ಈ ಚಿತ್ರವನ್ನು ಇಷ್ಟಪಟ್ಟು ಮಾಡಿದ್ದೇನೆ ಎನ್ನುತ್ತಾರೆ ಐಶ್ವರ್ಯಾ.
1997ರಲ್ಲಿ ಆರಂಭಿಸಿದ ವೃತ್ತಿ ಬದುಕಿನಿಂದ ಇಲ್ಲಿವರೆಗಿನ ನನ್ನ ಪ್ರಯಾಣ ಅದ್ಭುತ ಅನುಭವಗಳನ್ನು ನೀಡಿದೆ. ನಾನು ಆಯಾ ಸಮಯಗಳಲ್ಲಿ ಮಾಡುವ ಕೆಲಸಕ್ಕೆ ಶೇಕಡಾ 100ರಷ್ಟು ಶ್ರಮವನ್ನು ನೀಡುತ್ತೇನೆ. ಸಿನಿಮಾದ ವೃತ್ತಿ ಜೊತೆಗೆ ಇತರ ಕೆಲಸಗಳನ್ನೂ ಮಾಡಿಕೊಂಡು ಬಂದಿದ್ದೇನೆ. ವಿಶ್ವ ಸುಂದರಿಯಾಗಿ ನನ್ನ ವೃತ್ತಿ ಜೀವನ ಆರಂಭ ತುಂಬಾ ವಿಶಿಷ್ಟವಾಗಿದೆ. ಅಂದಿನ ಪರಿಸ್ಥಿತಿಯಲ್ಲಿ ಸಿನಿಮಾದ ತಾಂತ್ರಿಕತೆ, ಕೆಲಸ ಮಾಡಬೇಕಾದ ಶೈಲಿ ಕಷ್ಟವಾಗಿತ್ತು. ಇಂದು ಸಿನಿಮಾ ಉದ್ಯಮ ಸಾಕಷ್ಟು ಬೆಳೆದಿದೆ. ನನಗೆ ಉತ್ತಮ ಸಹೋದ್ಯೋಗಿಗಳು ಸಿಕ್ಕಿದ್ದಾರೆ. ಮಾಧ್ಯಮಗಳಿಂದ ಮತ್ತು ಪ್ರೇಕ್ಷಕರಿಂದ ಪ್ರೋತ್ಸಾಹ ಸಿಕ್ಕಿದೆ. ಈ ನಿಟ್ಟಿನಲ್ಲಿ ನಾನು ಎಲ್ಲರಿಗೂ ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.