ಪ್ರತ್ಯೂಷಾ - ರಾಹುಲ್ ರಾಜ್ ಸಿಂಗ್
ನವದೆಹಲಿ: ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಬಾಯ್ ಫ್ರೆಂಡ್ ರಾಹುಲ್ ರಾಜ್ ಸಿಂಗ್ ಅವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಆರೋಪಿಯನ್ನು ಶೀಘ್ರ ಬಂಧಿಸುವ ಸಾಧ್ಯತೆ ಇದೆ.
ಪ್ರತ್ಯೂಷಾ ತಾಯಿ ಸೋಮಾ ಅವರು ರಾಹುಲ್ ರಾಜ್ ಸಿಂಗ್ ಅವರ ವಿರುದ್ಧ ಇಂದು ಬಂಗೂರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹಾಗೂ ಹಲ್ಲೆ ಮಾಡಿದ ಆರೋಪದಡಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ಇದುವರೆಗೆ 12 ಜನರ ಹೇಳಿಕೆಗಳನ್ನು ದಾಖಲಿಸಿದ್ದು, ಕಳೆದ ಏಪ್ರಿಲ್ 4ರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಹುಲ್ ರಾಜ್ ಸಿಂಗ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಬಂಧಿಸುವ ಸಾಧ್ಯತೆ ಇದೆ.
ರಾಹುಲ್ ಜೊತೆಗಿನ ಸಂಬಂಧದ ಬಗ್ಗೆ ಪ್ರತ್ಯೂಷಾ ತುಂಬಾನೆ ನೊಂದಿದ್ದಳು ಮತ್ತು ಕಾರ್ಯಕ್ರಮವೊಂದರಲ್ಲಿ ರಾಹುಲ್ ರಾಜ್ ಸಿಂಗ್ ಸಾರ್ವಜನಿಕವಾಗಿಯೇ ಆಕೆಯ ಮೇಲೆ ಹಲ್ಲೆ ನಡೆಸಿದ್ದ ಎಂದು ಪ್ರತ್ಯೂಷಾ ಗೆಳತಿ ಪೊಲೀಸರಿಗೆ ತಿಳಿಸಿದ್ದಾರೆ.
ಈ ಮಧ್ಯೆ, ರಾಹುಲ್ ರಾಜ್ ಸಿಂಗ್ ಅವರ ತಂದೆ, ಪ್ರತ್ಯೂಷಾ ಸ್ವತಃ ತನ್ನ ಪೋಷಕರ ವಿರುದ್ಧವೇ ದೂರು ನೀಡಲು ಮುಂದಾಗಿದ್ದಳು ಎಂದು ಹೇಳಿದ್ದಾರೆ.