ನವದೆಹಲಿ: ಸೋರಿಯಾದ ನಟಿ ಕಂಗನಾ ಹಾಗೂ ಹೃತಿಕ್ ರೋಷನ್ ಚಿತ್ರಗಳು ನಕಲಿ ಫೋಟೋಗಳು ಎಂದು ಹೃತಿಕ್ ಪರ ವಕೀಲ ಬುಧವಾರ ಸ್ಪಷ್ಟಪಡಿಸಿದ್ದಾರೆ.
ನಟ ಹೃತಿಕ್ ರೋಷನ್ ಹಾಗೂ ಕಂಗನಾ ನಡುವಿನ ಕಾದಾಟ ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆದುಕೊಳ್ಳುತ್ತಿರುವ ಮಧ್ಯೆಯೇ ನಿನ್ನೆಯಷ್ಟೇ ಇಬ್ಬರ ಅಪ್ಪುಗೆಯ ಫೋಟೋವೊಂದು ಸೋರಿಕೆಯಾಗಿ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿತ್ತು.
ಇದೀಗ ಈ ಫೋಟೋ ಕುರಿತಂತೆ ಸ್ಪಷ್ಟನೆ ನೀಡಿರುವ ಹೃತಿಕ್ ಪರ ವಕೀಲ, ಫೋಟೋವೊಂದು ಕಣ್ಣಿಗೆ ಮಣ್ಣೆರೆಚುವ ಪ್ರಯತ್ನವಾಗಿದೆ. ಇದು ನಕಲಿ ಫೋಟೋವಾಗಿದೆ. ಫೋಟೋದಲ್ಲಿ ಸತ್ಯತೆಯನ್ನು ಮರೆಮಾಚಿ ಸುಳ್ಳನ್ನು ಹೈಲೈಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ನಿಜಕ್ಕೂ ಫೋಟೋ ಆಶ್ಚರ್ಯವನ್ನುಂಟು ಮಾಡಿದೆ. ಇಂತಹ ಸುಳ್ಳು ಫೋಟೋಗಳನ್ನು ಜನರು ನಂಬುತ್ತಿರುವುದು ಬೇಸರ ಸಂಗತಿ. ಫೋಟೋದಲ್ಲಿ ಸತ್ಯವನ್ನು ಮರೆಮಾಚಲಾಗಿದೆ. ನಂಬಿಕೆ ಅರ್ಹವಾದ ಸಾಕ್ಷಿಗಳನ್ನಿಟ್ಟುಕೊಂಡು ವಾದ ಮಾಡಿ ಎಂದು ಹೇಳಿದ್ದಾರೆ.
ಸತ್ಯವನ್ನು ಮರೆಮಾಚುವ ಪ್ರಯತ್ನಗಳು ನಡೆಯುತ್ತಿದೆ. ನಾವು ತಲೆಮರೆಸಿಕೊಳ್ಳುವುದಿಲ್ಲ. ಇಂತಹ ಪ್ರಯತ್ನಗಳಿಂದ ಏನನ್ನು ಸಾಧಿಸಲು ಹೊರಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಇದರಂತೆ ಕಂಗನಾ ಅವರ ವಕೀಲರು ಕೂಡ ಪ್ರತಿಕ್ರಿಯೆ ನೀಡಿದ್ದು, ಹೃತಿಕ್ ಅವರ ಫೋಟೋಗಳು ಬಿಡುಗಡೆಗೊಂಡಿದೆ. ಈ ಬಗ್ಗೆ ಹೃತಿಕ್ ಆಗಲಿ ಅಥವಾ ಅವರ ಪರವಕೀಲರಾಗಲಿ ಮುಂದೆ ಬಂದು ಸರಿಯಾದ ರೀತಿಯಲ್ಲಿ ಸ್ಪಷ್ಟನೆ ನೀಡಬೇಕಿದೆ. ಒಂದು ವೇಳೆ ಫೋಟೋ ಸುಳ್ಳು, ನಕಲಿ ಎಂದು ಹೇಳಿದ್ದೇ ಆದರೆ, ಅದಕ್ಕೆ ಸರಿಯಾದ ಸಾಕ್ಷ್ಯಾಧಾರಗಳನ್ನು ಒದಗಿಸಲಿ. ಸರಿಯಾದ ರೀತಿಯಲ್ಲಿ ವಾದ ಮಂಡಿಸಲಿ. ಪ್ರಕರಣದಲ್ಲಿ ಹೃತಿಕ್ ತಪ್ಪಿಸಿಕೊಳ್ಳಲು ಖಂಡಿತವಾಗಿಯೂ ಪ್ರಯತ್ನ ನಡೆಸುತ್ತಿರುತ್ತಾರೆಂದು ಹೇಳಿದ್ದಾರೆ.
ತಮ್ಮ ಹಾಗೂ ಕಂಗನಾ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಇತ್ತೀಚೆಗಷ್ಟೇ ಹೃತಿಕ್ ರೋಷನ್ ಅವರು ಹೇಳಿದ್ದರು. ಕಂಗನಾ ಹಾಗೂ ಹೃತಿಕ್ ಅವರ ಸಂಬಂಧಕ್ಕೆ ಪುಷ್ಟಿ ನೀಡುವಂತಹ ಹೊಸ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದ್ದು, ಇಬ್ಬರ ನಡುವಿನ ಒಡನಾಟಕ್ಕೆ ಇಂದು ಪುಷ್ಟಿ ನೀಡುವಂತಿದೆ.
ಕಳೆದ 1 ವರ್ಷದಿಂದಲೂ ಹೃತಿಕ್ ರೋಷನ್ ಮತ್ತು ಕಂಗನಾ ಮಧ್ಯೆ ಸಂಬಂಧವಿದೆ ಎಂಬ ವದಂತಿಗಳು ಹರಿದಾಡುತ್ತಿದೆ. ಇದನ್ನು ಎಲ್ಲರೂ ನಿಜವೆಂದೇ ನಂಬಿದ್ದರು. ಆದರೆ ಇಬ್ಬರೂ ಎಲ್ಲಿಯೂ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲೂ ಗಾಸಿಪ್ ಹಬ್ಬಿರಲಿಲ್ಲ. ಆದರೆ, ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕಂಗನಾ ಹೃತಿಕ್ ತಮ್ಮ ಮಾಜಿ ಪ್ರಿಯಕರ ಎಂದು ಹೇಳುವ ಮೂಲಕ ಬಾಂಬ್ ವೊಂದನ್ನು ಸಿಡಿಸಿದ್ದರು. ಇಲ್ಲಿಂದ ಇಬ್ಬರ ಮಧ್ಯೆ ವಿವಾದವೊಂದು ಆರಂಭವಾಗಿತ್ತು.
ಒಂದು ಕಡೆ ಹೃತಿಕ್ ಪರ ವಕೀಲರು ಕಂಗನಾ ಅವರದ್ದು ಒನ್ ವೇ ಲವ್ ಆಗಿದ್ದು ಕಂಗನಾ ಹೃತಿಕ್ ಅವರನ್ನು ಹಿಂಬಾಲಿಸುತ್ತಿದ್ದಾರೆಂದು ಆರೋಪಿಸುತ್ತಿದ್ದಾರೆ. ಮತ್ತೊಂದೆಡೆ ಕಂಗನಾ ಪರ ವಕೀಲರು, ಹೃತಿಕ್ ಅವರೇ ಕಂಗನಾಳ ಇಮೇಲ್ ನ್ನು ಹ್ಯಾಕ್ ಮಾಡಿದ್ದಾರೆಂದು ಆರೋಪ ಮಾಡುತ್ತಿದ್ದಾರೆ. ಇದರಂತೆ ಹೃತಿಕ್ ಕೂಡ ತಾವು ಹೇಳುತ್ತಿರುವುದು ಸತ್ಯ ಎನ್ನುತ್ತಿದ್ದರೆ, ಕಂಗನಾ ಕೂಡ ತಾವು ಹೇಳುತ್ತಿರುವುದು ಸತ್ಯ ಎನ್ನುತ್ತಿದ್ದಾರೆ.