ಸಲ್ಮಾನ್ ಖಾನ್, ಶಾರುಖ್ ಖಾನ್(ಚಿತ್ರ ಕೃಪೆ: ಕಲರ್ಸ್ ಚಾನೆಲ್)
ನವದೆಹಲಿ: ಬಾಲಿವುಡ್ ಸ್ಟಾರ್ ಗಳಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರು ಬಿಗ್ ಬಾಸ್ ರಿಯಾಲಿಟಿ ಷೋ ಚಿತ್ರೀಕರಣದ ವೇಳೆ ಯಾವುದೇ ತಪ್ಪು ಮಾಡಿಲ್ಲ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಶಾರುಕ್ ಮತ್ತು ಸಲ್ಮಾನ್ ಖಾನ್ ಹಿಂದೂ ನಂಬಿಕೆಗಳನ್ನು ಘಾಷಿಗೊಳಿಸಿದ್ದಾರೆ ಎಂಬುದು ವಿಚಾರಣೆಗೆ ಅರ್ಹವಾದ ಪ್ರಕರಣ ಅಲ್ಲ. ಬಿಗ್ ಬಾಸ್ ಷೋ ನಡೆಸುವ ಸೆಟ್ ಆಗಿ ಕಾಳಿ ದೇಗುಲವನ್ನು ನಿರ್ಮಿಸಲಾಗಿತ್ತು. ಹಿಂದೂ ಭಾವನೆಗಳಿಗೆ ಧಕ್ಕೆ ತರುವಂತಹ ಉದ್ದೇಶವನ್ನು ಶಾರುಕ್, ಸಲ್ಮಾನ್ ಹೊಂದಿರಲಿಲ್ಲ ಎಂದು ನ್ಯಾಯಾಲಯದಲ್ಲಿ ದೆಹಲಿ ಪೊಲೀಸರು ಹೇಳಿದ್ದಾರೆ.
ಸ್ಟುಡಿಯೋವೊಂದರಲ್ಲಿ ಈ ಚಿತ್ರೀಕರಣ ನಡೆದಿದ್ದು, ಯಾವುದೇ ಕಾಳಿ ದೇವಸ್ಥಾನದಲ್ಲಿ ನಡೆದಿಲ್ಲ. ಬಿಗ್ ಬಾಸ್ ಷೋಗಾಗಿ ಕಾಳಿ ದೇಗುಲದ ಸೆಟ್ ನಿರ್ಮಿಸಲಾಗಿತ್ತು. ಅಲ್ಲಿ ಪ್ರತಿ ಷೋ ನಡೆಸಿ ಕೊಡುವ ಹಾಗೇ ನಡೆಸಿ ಕೊಟ್ಟಿದ್ದಾರೆ. ಇದರಿಂದ ಯಾವುದೇ ದುರುದ್ದೇಶವಿಲ್ಲ ಎಂದು ನ್ಯಾಯಾಲಯಕ್ಕೆ ವರದಿ ನೀಡಿದ್ದಾರೆ.
ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ವರದಿ ನೀಡುವಂತೆ ದೆಹಲಿ ಕೋರ್ಟ್ ದೆಹಲಿ ಪೊಲೀಸರಿಗೆ ಸೂಚಿಸಿತ್ತು.
ಬಿಗ್ ಬಾಸ್ ಸೀಸನ್ 9 ಚಿತ್ರೀಕರಣದ ವೇಳೆ ಶೂ ಕಳಚದೇ ಕಾಳಿ ದೇವಾಲಯದ ಸೆಟ್ ಅನ್ನು ಪ್ರವೇಶಿಸುವ ಮೂಲಕ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತ ಟಿವಿ ತಂಡದ ಸದಸ್ಯರು ಭಕ್ತರ ಮನಸ್ಸಿಗೆ ಘಾಸಿ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಗೌರವ್ ಗುಲತಿ ಎಂಬುವವರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.