ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್
ಮುಂಬೈ: ಬಾಲಿವುಡ್ ನಟ ಮತ್ತು ಗೆಳೆಯ ಸಲ್ಮಾನ್ ಖಾನ್ ಅವರ 'ರೇಪ್ ಆಗಿರುವ ಮಹಿಳೆಯರು' ಹೇಳಿಕೆ ದುರದೃಷ್ಟಕರ ಮತ್ತು ಅಸೂಕ್ಷ್ಮ ಎಂದಿದ್ದಾರೆ ಮತ್ತೊಬ್ಬ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್.
ತಮ್ಮ ಮುಂದಿನ ಸಿನೆಮಾ 'ದಂಗಲ್' ಪೋಸ್ಟರ್ ಅನಾವರಣ ಮಾಡಿದ ಅಮೀರ್ ಖಾನ್ ಅವರಿಗೆ ಸಲ್ಮಾನ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುವಂತೆ ಪ್ರಶ್ನಿಸಿದಾಗ "ನಾನಲ್ಲಿ ಇರಲಿಲ್ಲ, ಆದರೆ ಮಾಧ್ಯಮ ವರದಿಗಳನ್ನು ಆಧರಿಸಿ ಹೇಳುವುದಾದರೆ, ಅವರು ಹೇಳಿದ್ದು ದುರದೃಷ್ಟಕರ ಅಥವಾ ಬಹುಶಃ ಅಸೂಕ್ಷ್ಮ ಎಂದು ನನಗನ್ನಿಸುತ್ತಿದೆ" ಎಂದಿದ್ದಾರೆ.
'ಅಂದಾಜ್ ಅಪ್ನಾ ಅಪ್ನಾ' ಸಹ ನಟನೊಂದಿಗೆ ಈ ವಿಷಯವಾಗಿ ಮಾತನಾಡಿದ್ದಿರಾ ಎಂಬ ಪ್ರಶ್ನೆಗೆ "ಇಲ್ಲ ನಾನು ಅವರ ಜೊತೆ ಮಾತನಾಡಿಲ್ಲ... ಅವರಿಗೆ ಸಲಹೆ ನೀಡಲು ನಾನ್ಯಾರು" ಎಂದು ಪ್ರಶ್ನಿಸಿದ್ದಾರೆ.
ತಮ್ಮ ಮುಂದಿನ ಸಿನೆಮಾ 'ಸುಲ್ತಾನ್' ಬಗ್ಗೆ ವರದಿಗಾರರೊಂದಿಗೆ ಮಾತನಾಡುವಾಗ, "ಸಿನೆಮಾದಲ್ಲಿ ನಾನು ಕುಸ್ತಿ ಅಂಕಣದಿಂದ ಹೊರಬರುವಾಗ 'ರೇಪ್ ಆಗಿರುವ ಮಹಿಳೆಯಂತಾಗಿರುತ್ತಿದ್ದೆ'" ಎಂದಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.
ಇದು ಹಲವರ ಆಕ್ರೋಶಕ್ಕೂ ಕಾರಣವಾಗಿತ್ತು. ಮಹಿಳೆಯರ ರಾಷ್ಟ್ರೀಯ ಆಯೋಗ ಮತ್ತು ಶಿವಸೇನೆ ಪಕ್ಷ ನಟನಿಂದ ಸಾರ್ವಜನಿಕ ಕ್ಷಮಾಪಣೆಗೆ ಆಗ್ರಹಿಸಿತ್ತು. ನಂತರ ಸಲ್ಮಾನ್ ಆಯೋಗಕ್ಕೆ ತಮ್ಮ ವಕೀಲರ ಮೂಲಕ ಪತ್ರ ಬರೆದಿದ್ದರು, ಆದರೆ ಅದು ಕ್ಷಮೆ ಕೋರಿದ್ದಲ್ಲ ಎಂದು ಆಯೋಗ ನಿರಾಕರಿಸಿ ಆಯೋಗದ ಮುಂದೆ ಜುಲೈ 8 ರಂದು ಹಾಜರಾಗುವಂತೆ ನಟನಿಗೆ ತಿಳಿಸಿತ್ತು.