ನವದೆಹಲಿ: ಕಳೆದವಾರವಷ್ಟೇ ತೆರೆಕಂಡು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿರುವ ಸುಲ್ತಾನ್ ಚಿತ್ರತಂಡಕ್ಕೆ ಹೊಸ ತಲೆನೋವು ಶುರುವಾಗಿದ್ದು, ಚಿತ್ರತಂಡದಿಂದ ತಮಗೆ ಮೋಸವಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ.
ಮುಜಾಫರ್ ಪುರದ ನಿವಾಸಿ ಮಹಮದ್ ಸಬಿರ್ ಅನ್ಸಾರಿ ಅಲಿಯಾಸ್ ಸಬಿರ್ ಬಾಬ ಎಂಬುವವರು ಮುಖ್ಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಳಿ ದೂರು ದಾಖಲಿಸಿದ್ದು, ಚಿತ್ರತಂಡ ತಮಗೆ ಮೋಸ ಮಾಡಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಸಬಿರ್ ಬಾಬ ಆರೋಪಿಸಿರುವಂತೆ 2010ರಲ್ಲಿ ಸಲ್ಮಾನ್ ಖಾನ್ ಮತ್ತು ನಿರ್ದೇಶಕ ಅಲಿ ಜಾಫರ್ ಅಬ್ಬಾಸ್ ಅವರು ತಮ್ಮ ಜಿವನಾಧಾರಿತ ಚಿತ್ರ ಮಾಡುತ್ತೇವೆ. ಇದಕ್ಕಾಗಿ ತಮಗೆ 20 ಕೋಟಿ ರು. ಪರಿಹಾರ ಧನ ನೀಡುವುದಾಗಿ ಹೇಳಿ ಪ್ರಮಾಣ ಮಾಡಿದ್ದರು.
ಆದರೆ ಇದೀಗ ಪ್ರಮಾಣ ಮಾಡಿ 6 ವರ್ಷಗಳೇ ಕಳೆದರೂ ಸಲ್ಮಾನ್ ಖಾನ್ ತಮ್ಮ ಭರವಸೆಯನ್ನು ಪೂರ್ಣಗೊಳಿಸಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಮೂಲಗಳ ಪ್ರಕಾರ ಕಳೆದ ಜುಲೈ 8ರಂದೇ ದೂರು ದಾಖಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ನಟ ಸಲ್ಮಾನ್ ಖಾನ್, ನಟಿ ಅನುಷ್ಕಾ ಶರ್ಮಾ ಮತ್ತು ನಿರ್ದೇಶಕ ಅಲಿ ಜಾಫರ್ ಅಬ್ಬಾಸ್ ಅವರ ವಿರುದ್ಧ
ಐಪಿಸಿ ಸೆಕ್ಷನ್ 420 (ವಂಚನೆ), 406 (ವಿಶ್ವಾಸ ದ್ರೋಹ), 504 (ಉದ್ದೇಶ ಪೂರ್ವ ಅವಮಾನ) ಹಾಗೂ 506 (ಕ್ರಿಮಿನಲ್ ಬೆದರಿಕೆ)ರ ಅನ್ವಯ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಸಬಿರ್ ಬಾಬ ಪರ ವಕೀಲ ಸುಧೀರ್ ಕುಮಾರ್ ಓಝಾ ಅವರು, 2010ರಲ್ಲಿ ಮುಂಬೈನಲ್ಲಿ ಸಲ್ಮಾನ್ ಖಾನ್ ಸಬಿರ್ ಬಾಬ ಅವರನ್ನು ಭೇಟಿ ಮಾಡಿ, ನಿಮ್ಮ ಜೀವನಾಧಾರಿತ ಚಿತ್ರ ಮಾಡುವುದಾಗಿ ನಂಬಿಸಿ, 20 ಕೋಟಿ ಹಣ ನೀಡುವುದಾಗಿ ಹೇಳಿದ್ದಾರೆ. ಆದರೆ ಸಲ್ಮಾನ್ ಚಿತ್ರವನ್ನು ನಿರ್ಮಿಸಿಲ್ಲ, ಹಣವನ್ನು ಕೂಡ ನೀಡಿಲ್ಲ ಎಂದು ತಿಳಿಸಿದ್ದಾರೆ.
ಪ್ರಸ್ತುತ ದೂರುದಾರರ ಅರ್ಜಿಯನ್ನು ಸ್ವೀಕರಿಸಿರುವ ಮುಜಾಫರ್ ಪುರ ಜಿಲ್ಲಾ ಮ್ಯಾಡಿಸ್ಟ್ರೇಟ್ ರಾಮ ಚಂದ್ರ ಪ್ರಸಾದ್ ಅವರು, ಪ್ರಕರಣವನ್ನು ಎಸ್ ಕೆ ತ್ರಿಪಾಠಿ ನೇತೃತ್ವದ ಏಕ ಸದಸ್ಯ ಪೀಠಕ್ಕೆ ರವಾನಿಸಿ, ಜುಲೈ 28ರಂದು ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ.