ಉಡ್ತಾ ಪಂಜಾಬ್ ಚಿತ್ರದ ಸ್ಟಿಲ್
ನವದೆಹಲಿ: ಸರ್ಟಿಫಿಕೇಷನ್ ಪ್ರಕ್ರಿಯೆ ಸ್ವತಂತ್ರವಾಗಿದ್ದು, ಅದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಲು ಬರುವುದಿಲ್ಲ ಮತ್ತು ಈ ಬಗ್ಗೆ ಕೋರ್ಟ್ ತೀರ್ಪುಗಳು ಸಹ ಸ್ಪಷ್ಟವಾಗಿ ಹೇಳಿವೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು ಬುಧವಾರ ಸ್ಪಷ್ಟಪಡಿಸಿದ್ದಾರೆ.
ಉಡ್ತಾ ಪಂಜಾಬ್ ಚಿತ್ರಕ್ಕೆ ಕತ್ತರಿ ಹಾಕಿದ ಸೆನ್ಸಾರ್ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಚಿತ್ರದ ನಿರ್ದೇಶಕ ಅನುರಾಗ್ ಕಶ್ಯಪ್ ಅವರು, ಚಿತ್ರದಲ್ಲಿ 89 ದೃಶ್ಯಗಳಿಗೆ ಕತ್ತರಿ ಹಾಕಿದರೆ, ಬಹುತೇಕ ಸಿನಿಮಾದ ಆಶಯವನ್ನೇ ಕೊಂದಂತಾಗುತ್ತದೆ. ನಾವು ಭಾರತದಲ್ಲಿದ್ದೆವಾ? ನನಗೆ ಉತ್ತರ ಕೊರಿಯಾದ ಸರ್ವಾಧಿಕಾರದ ಆಡಳಿತದಲ್ಲಿದ್ದಂತೆ ಭಾಸವಾಗುತ್ತಿದೆ ಎಂದಿದ್ದರು. ಅಲ್ಲದೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಯಾವುದೇ ಸಹಕಾರ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಕಶ್ಯಪ್ ಆರೋಪದ ಬಗ್ಗೆ ಇಂದು ಸ್ಪಷ್ಟನೆ ನೀಡಿರುವ ಅಧಿಕಾರಿಗಳು, ಸೆನ್ಸಾರ್ ಮಂಡಳಿಯ ನಿರ್ಧಾರದ ಬಗ್ಗೆ ಚಿತ್ರ ನಿರ್ಮಾಪಕರಿಗೆ ಅಸಮಾಧಾನವಿದ್ದರೆ ಚಲನಚಿತ್ರ ಪ್ರಮಾಣೀಕರಣ ಮೇಲ್ಮನವಿ ನ್ಯಾಯಮಂಡಳಿ(ಎಫ್ ಸಿಎಟಿ)ಯಲ್ಲಿ ಪ್ರಶ್ನಿಸಲಿ ಎಂದಿದ್ದಾರೆ.
ಪಂಜಾಬಿನ ಡ್ರಗ್ ಮಾಫಿಯಾ ಸತ್ಯಾಸತ್ಯತೆ ಬಿಚ್ಚಿಡುವ ಉಡ್ತಾ ಪಂಜಾಬ್ ಚಿತ್ರಕ್ಕೆ ಕತ್ತರಿ ಹಾಕಿರುವ ಸೆನ್ಸಾರ್ ಮಂಡಳಿ, ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ನೀಡಿದೆ. ಚಿತ್ರ ತಂಡ ಇದೀಗ ಸೆನ್ಸಾರ್ ವಿರುದ್ಧ ಕಾನೂನು ಸಮರಕ್ಕಿಳಿಯಲು ನಿರ್ಧರಿಸಿದೆ.