ಮುಂಬೈ: ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆಗಿನ ಸಂಬಂಧ ಕುರಿತಂತೆ ಪದೇ ಪದೇ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗುತ್ತಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕಟುವಾಗಿಯೇ ತಿರುಗೇಟು ನೀಡಿದ್ದು, ತಮ್ಮ ವಿರುದ್ಧ ಟೀಕಿಸುತ್ತಿರುವವರು ಸ್ತ್ರೀ ದ್ವೇಷಿಗಳು ಎಂದು ಜರಿದಿದ್ದಾರೆ.
ನಟ ಸಲ್ಮಾನ್ ಖಾನ್ ಅಭಿನಯದ "ಸುಲ್ತಾನ್' ಚಿತ್ರದ ಬಿಡುಗಡೆಗೂ ಮುನ್ನ ಪ್ರತಿಕ್ರಿಯೆ ನೀಡಿರುವ ಅನುಷ್ಕಾ, "ನಾನು ಅಭಿಯಸಿರುವ ಸಿನಿಮಾಗಳಲ್ಲಿ ಏನಾದರೂ ತಪ್ಪಾಗಿದ್ದರೆ ಟೀಕಿಸುವುದರಲ್ಲಿ ಅರ್ಥವಿದೆ. ಅದನ್ನು ಬಿಟ್ಟು ನನಗೆ ಸಂಬಂಧವೇ ಇಲ್ಲದ ವಿಷಯಗಳ ಬಗ್ಗೆ ಟೀಕಿಸುವುದೆಂದರೆ? ಆಗ ತುಂಬಾ ನೋವಾಗಿತ್ತು. ಅದಕ್ಕೆ ಏನೆಂದು ಪ್ರತಿಕ್ರಿಯಿಸಬೇಕೆಂದೇ ತಿಳಿಯಲಿಲ್ಲ. ಈ ಟೀಕೆಗಳು ಸ್ತ್ರೀ ದ್ವೇಷಿಗಳ ಟೀಕೆಗಳು ಎಂದು ಬಳಿಕ ಅದನ್ನು ನಿರ್ಲಕ್ಷಿಸಿದೆ ಎಂದು ಅನುಷ್ಕಾ ಹೇಳಿದ್ದಾರೆ.
ಖಾಸಗಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅನುಷ್ಕಾ ಶರ್ಮಾ, ವಿನಾಕಾರಣ ಟೀಕೆಗಳಿಗೆ ನಾನು ಸ್ಪಂದಿಸುವುದೇ ಇಲ್ಲ ಎಂದು ಪರೋಕ್ಷವಾಗಿ ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.
2014ರಲ್ಲಿ ಒಂದಾದ 28 ವರ್ಷದ ಅನುಷ್ಕಾ ಮತ್ತು 27 ವರ್ಷದ ವಿರಾಟ್ ಕೊಹ್ಲಿ ಜೋಡಿ ಕುರಿತಂತೆ ಸಾಕಷ್ಟು ಬಾರಿ ಟೀಕೆಗಳು ಹರಿದಾಡಿದ್ದವು. ಕ್ರಿಕೆಟ್ ನಲ್ಲಿ ಕೊಹ್ಲಿ ಕಳಪೆ ಫಾರ್ಮ್ ಗೆ ಅನುಷ್ಕಾ ಜೊತೆಗಿನ ಸಂಬಂಧವೇ ಕಾರಣ ಎಂದು ಕಾಲೆಳೆದಿದ್ದ ಟ್ವೀಟಿಗರು, ಬಳಿಕ ಕೊಹ್ಲಿ ಫಾರ್ಮ್ ಗೆ ಬಂದಾಗ ಬ್ರೇಕ್ ಅಪ್ ನಿಂದಾಗಿಯೇ ಕೊಹ್ಲಿ ಉತ್ತಮ ಅಟವಾಡಿದ ಎಂದು ತಮಾಷೆ ಮಾಡಿದ್ದರು. ಈ ಬಗ್ಗೆ ಸ್ವತಃ ವಿರಾಟ್ ಕೊಹ್ಲಿ ಕೂಡ ಟ್ವೀಟಿಗರನ್ನು ತರಾಟೆಗೆ ತೆಗೆದುಕೊಂಡಿದ್ದರು.