ಮುಂಬೈ: ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಾರ್ಯಕ್ರಮದ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿದ ಹಾಸ್ಯ ನಟ ಮತ್ತು ನಿರೂಪಕ ಕಪಿಲ್ ಶರ್ಮಾ ತಮ್ಮ ನೂತನ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸವ ಆಶಯ ವ್ಯಕ್ತಪಡಿಸಿದ್ದಾರೆ.
ತಮ್ಮ ಹಿಂದಿನ ಕಾರ್ಯಕ್ರಮದಲ್ಲಿ ಬಾಲಿವುಡ್ ಮತ್ತು ಕ್ರೀಡಾ ಕ್ಷೇತ್ರದ ಗಣ್ಯಾತಿಗಣ್ಯರನ್ನು ಆಹ್ವಾನಿಸಿ ಮನರಂಜನೆ ನೀಡಿದ್ದ ಕಪಿಲ್ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ಇರಾದೆ ವ್ಯಕ್ತಪಡಿಸಿದ್ದಾರೆ. ತಮ್ಮ ನೂತನ ’ಕಾಮಿಡಿ ಸರ್ಕಸ್’ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸುವುದರ ಜತೆಗೆ ಮೋದಿ ಅವರು ಪುಟ್ಟ ಪಟ್ಟಣದಿಂದ ಪ್ರಧಾನಿಯಾಗುವಲ್ಲಿವರೆಗಿನ ಸ್ಪೂರ್ತಿದಾಯಕ ಜೀವನ ಯಾತ್ರೆಯನ್ನು ಬಿಚ್ಚಿಡುವ ಅಭಿಲಾಶೆಯನ್ನು ಕಪಿಲ್ ವ್ಯಕ್ತಪಡಿಸಿದ್ದಾರೆ.
ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಕಪಿಲ್ ಶರ್ಮಾ ಸಾಕಷ್ಟು ಯೋಜನೆ ರೂಪಿಸಿಕೊಂಡಿದ್ದು, ಚಾಯ್ ವಾಲಾ ದೇಶದ ಪ್ರಧಾನಿ ಆದ ಕಥೆಯನ್ನು ‘ಇನ್ಸ್ ಪಿರೇಶನಲ್’ ಎಂಬ ಟೈಟಲ್ ಅಡಿಯಲ್ಲಿ ಪ್ರಸಾರ ಮಾಡಲು ಯೋಚಿಸಿದ್ದಾರಂತೆ. ಅಲ್ಲದೆ ಸಾಧ್ಯವಾದರೆ ಪ್ರಧಾನಿ ಮೋದಿ ಅವರ ಬಳಿ ಈ ಕುರಿತು ಮಾತುಕತೆ ನಡೆಸುವುದಾಗಿ ಕಪಿಲ್ ತಿಳಿಸಿದ್ದಾರೆ.
ಇತ್ತೀಚೆಗೆ ನಾನು ‘ದಿ ಎಲ್ಲೆನ್ ಡಿಜೆನೆರೆಸ್ ಶೋ’ ಎಂಬ ಅಮೆರಿಕದ ಖಾಸಗಿ ಟಿವಿ ಕಾರ್ಯಕ್ರಮವೊಂದರಲ್ಲಿ ಅಧ್ಯಕ್ಷ ಬರಾಕ್ ಒಬಾಮ ಅವರು ಕಾಣಿಸಿಕೊಂಡಿದ್ದರು. ಇದರಿಂದ ಸ್ಫೂರ್ತಿ ಪಡೆದ ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ನನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಿದರೆ ಚೆನ್ನಾಗಿರುತ್ತದೆ ಎಂದು ಆಲೋಚಿಸಿದೆ. ಅಂತೆಯೇ ಪ್ರಜಾಪ್ರತಿನಿಧಿಗಳು ಪ್ರಜೆಗಳೊಂದಿಗೆ ಸದಾ ಸಂಪರ್ಕದಲ್ಲಿರಬೇಕು ಎಂದು ಎಂದು ಕಪಿಲ್ ಶರ್ಮಾ ಹೇಳಿದ್ದಾರೆ.
ಈ ಹಿಂದಿನ ಕಾರ್ಯಕ್ರಮದಲ್ಲಿ ಬಾಲಿವುಡ್ ಮತ್ತು ಕ್ರೀಡಾಕ್ಷೇತ್ರದ ಗಣ್ಯರನ್ನು ಆಹ್ವಾನಿಸಿದ್ದ ಕಪಿಲ್, ತಮ್ಮ ನೂತನ ಕಾರ್ಯಕ್ರಮದಲ್ಲಿ ಇವರೊಂದಿಗೆ ರಾಜಕರಾಣಿಗಳನ್ನು ಕೂಡ ಆಹ್ವಾನಿಸುವ ಆಶಯ ವ್ಯಕ್ತ ಪಡಿಸಿದ್ದಾರೆ.