ಮುಂಬೈ: ಸುಲ್ತಾನ್ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದ ವೇಳೆ ನಟ ಸಲ್ಮಾನ್ ಖಾನ್ ಗೆ ಅಪಮಾನ ಮಾಡಿದ ಹಿನ್ನಲೆಯಲ್ಲಿ ಬಾಲಿವುಡ್ ಗಾಯಕ ಅರಿಜಿತ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೋರಿದ್ದಾರೆ.
ಕೆಲ ದಿನಗಳ ಹಿಂದೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಲ್ಮಾನ್ ಖಾನ್ಗೆ ತಮ್ಮ ಗಾಯನದ ಮೂಲಕ ಮುಜುಗರ ಉಂಟು ಮಾಡಿದ್ದ ಬಾಲಿವುಡ್ ಗಾಯಕ ಅರಿಜಿತ್ ಸಿಂಗ್ ಈಗ ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಲ್ಲು ಮಿಯಾ ಬಳಿ ಕ್ಷಮೆ ಕೇಳಿದ್ದಾರೆ. ಆದರೆ ಸಲ್ಮಾನ್ ಅಭಿಮಾನಿಗಳಿಂದ ವ್ಯಾಪಕ ಟೀಕಾತ್ಮಕ ಪ್ರತಿಕ್ರಿಯೆಗಳು ಬರುತ್ತಿದ್ದಂತೆಯೇ ತಮ್ಮ ಪೋಸ್ಟ್ ಅನ್ನು ಕಿತ್ತು ಹಾಕಿದ್ದಾರೆ.
ತಮ್ಮ ಕ್ಷಮಾಪಣಾ ಪೋಸ್ಟ್ ನಲ್ಲಿ ತಮ್ಮನ್ನು ತಾವು ಸಲ್ಮಾನ್ ಅಭಿಮಾನಿ ಎಂದು ಕರೆದುಕೊಂಡಿರುವ ಅರಿಜಿತ್ ಸಿಂಗ್, ತಾವು ಆ ದಿನ ಬೇಕೆಂದು ಮಾಡಿದ ಪ್ರಮಾದ ಅಲ್ಲ, ಅದು ಕೆಟ್ಟ ಘಳಿಗೆಯ ಘಟನೆಯಾಗಿದೆ. ಆ ಘಟನೆ ಬಳಿಕ ನಾನು ನಿಮ್ಮನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನ ಪಟ್ಟೆ. ಆದರೆ ಸಾಧ್ಯವಾಗಲಿಲ್ಲ. ಹೀಗಾಗಿ ಬೇರೆ ದಾರಿ ಇಲ್ಲದೇ ಇದೀಗ ನಾನು ಈ ಕ್ಷಮಾಪಣಾ ಪೋಸ್ಟ್ ಹಾಕಿದ್ದೇನೆ ಎಂದು ಅರಿಜಿತ್ ಸಿಂಗ್ ಹೇಳಿದ್ದಾರೆ.
ಕಳೆದ ಮಂಗಳವಾರ ಸಲ್ಮಾನ್ ಖಾನ್ರ ಮುಂಬರುವ ಚಿತ್ರ ಸುಲ್ತಾನ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದರು. ಚಿತ್ರದಲ್ಲಿ ಗಾಯಕ ಅರಿಜಿತ್ ಸಿಂಗ್ ಕೂಡ ಹಾಡು ಹೇಳಿದ್ದಾರೆ. ಆದರೆ ಸಲ್ನಾನ್ ಗೆ ಅಪಮಾನ ಮಾಡಿದ ಹಿನ್ನಲೆಯಲ್ಲಿ ತಮ್ಮ ಗಾಯನದ ಹಾಡನ್ನು ಚಿತ್ರದಿಂದ ಎಲ್ಲಿ ತೆಗೆದು ಹಾಕುತ್ತಾರೆಯೋ ಎಂದು ಶಂಕಿಸಿರುವ ಅರಿಜಿತ್ ಸಿಂಗ್ ಹಾಡನ್ನು ಚಿತ್ರದಿಂದ ತೆಗೆಯದಂತೆ ಮೇಲಿಂದ ಮೇಲೆ ಸಲ್ಮಾನ್ ಖಾನ್ಗೆ ಸಂದೇಶಗಳನ್ನು ಕಳಿಸುತ್ತಿದ್ದಾರೆ.
ಜತೆಗೆ ತಾವು ಆ ದಿನ ಬೇಕೆಂದು ಮಾಡಿದ ಪ್ರಮಾದ ಅಲ್ಲ, ಅದು ಕೆಟ್ಟ ಘಳಿಗೆಯ ಘಟನೆ ಎಂದು ಭಾಯಿ ಜಾನ್ಗೆ ಮನವರಿಕೆ ಮಾಡಿಕೊಡಲು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಮೆ ಸಂದೇಶ ರವಾನಿಸುತ್ತಿದ್ದಾರೆ.