ಎಂಟಿವಿ ಯುರೋಪ್ ಮ್ಯೂಸಿಕ್ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ
ಬಾಲಿವುಡ್ ರಾಣಿ ದೀಪಿಕಾ ಪಡುಕೋಣೆ ಅವರ ವಿದೇಶದಲ್ಲಿ ಮೊದಲ ರೆಡ್ ಕಾರ್ಪೆಟ್ ಪ್ರವೇಶ ನಿರೀಕ್ಷಿಸಿದಷ್ಟು ಮಟ್ಟದಲ್ಲಿ ಯಶಸ್ವಿಯಾಗಿಲ್ಲ ಅನಿಸುತ್ತದೆ.
ನಿನ್ನೆ ನೆದರ್ ಲ್ಯಾಂಡ್ ನ ರೊಟ್ಟರ್ ಡಾಮ್ ನಲ್ಲಿ ಎಂಟಿವಿ ಇಎಂಎ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ 30 ವರ್ಷ ಪ್ರಾಯದ ದೀಪಿಕಾ ಮೊನಿಷಾ ಸೈಸಿಂಗ್ ವಿನ್ಯಾಸಗೊಳಿಸಿದ ಉಡುಗೆ ಧರಿಸಿ ಭಾಗವಹಿಸಿದ್ದರು. ಆದರೆ ಉಡುಪು ಫ್ಯಾಶನ್ ದಿಗ್ಗಜರ ಮನಸೆಳೆಯುವಲ್ಲಿ ವಿಫಲವಾಗಿದೆ.ಅಲ್ಲದೆ ಅನೇಕ ಟೀಕೆಗಳನ್ನು ಅವರು ಎದುರಿಸಬೇಕಾಗಿ ಬಂದಿದೆ.
ಅಂತಾರಾಷ್ಟ್ರೀಯ ಪತ್ರಿಕೆ ಡೈಲಿ ಮೈಲ್ ದೀಪಿಕಾರನ್ನು ಅತ್ಯಂತ ಕೆಟ್ಟದಾಗಿ ಉಡುಗೆ ತೊಟ್ಟ ಸೆಲೆಬ್ರಿಟಿ ಎಂದು ಟೀಕೆ ಮಾಡಿ ಬಾಲಿವುಡ್ ಬ್ಲಂಡರ್ ಎಂದು ಶೀರ್ಷಿಕೆ ನೀಡಿದೆ.
ಡೈಲಿ ಮೇಲ್ ಎಂಬ ಪತ್ರಿಕೆ ಈ ರೀತಿ ಬರೆದಿದೆ: ಬಾಲಿವುಡ್ ಬ್ಲಂಡರ್: ಭಾರತೀಯ ನಟಿ ದೀಪಿಕಾ ಪಡುಕೋಣೆ ಬೆರಗುಗೊಳಿಸುವ ನಟಿಯಾಗಿರಬಹುದು, ಆದರೆ ಅವರು ಧರಿಸಿದ್ದ ಜೌಗು ಬಣ್ಣದ ಹಸಿರು ಬ್ರಾಲೆಟ್ ಮತ್ತು ಸ್ಕರ್ಟ್ ಕಾಂಬಿನೇಷನ್ ಅವರ ದೇಹದ ಸೌಂದರ್ಯಕ್ಕೆ ಸ್ವಲ್ಪ ಕೂಡ ಹೊಂದಿಕೆಯಾಗುತ್ತಿರಲಿಲ್ಲ.
ತಮ್ಮ ಮೊದಲ ಹಾಲಿವುಡ್ ಚಿತ್ರ ಎಕ್ಸ್ ಎಕ್ಸ್ ಎಕ್ಸ್: ರಿಟರ್ನ್ ಆಫ್ ಕ್ಸಾಂಡರ್ ಕೇಜ್ ನ ಬಿಡುಗಡೆಗೆ ಕಾಯುತ್ತಿರುವ ದೀಪಿಕಾ ತಮ್ಮ ಸಹ ನಟ ನೀನಾ ದೊಬ್ರಿವ್ ಜೊತೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನಿರೂಪಕರಲ್ಲಿ ಒಬ್ಬರಾಗಿದ್ದರು.
ಈ ಹಿಂದೆ ಇದೇ ಪತ್ರಿಕೆ, ದೀಪಿಕಾ ಪಡುಕೋಣೆ ಟೆನ್ನಿಸ್ ಆಟಗಾರ ನೊವಕ್ ಜೊಕೊವಿಕ್ ಜೊತೆ ಹೊಟೇಲ್ ನಲ್ಲಿ ಡಿನ್ನರ್ ಮುಗಿಸಿ ಹೊರಬರುತ್ತಿದ್ದಾಗ ಫೋಟೋ ತೆಗೆದು ಆಕೆ ಯಾರೆಂದು ಗುರುತಿಸುವಲ್ಲಿ ವಿಫಲವಾಗಿತ್ತು. ಆಗ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ದೀಪಿಕಾ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಆಗ ದೀಪಿಕಾ ಹೆಸರನ್ನು ಪ್ರಕಟಿಸಿ ಆಕೆ ಬಗ್ಗೆ ಲೇಖನ ಬರೆದು ಪತ್ರಿಕೆ ಜನರ ಕೋಪವನ್ನು ಶಮನಗೊಳಿಸಿತ್ತು.