ಪಾಕಿಸ್ತಾನಿ ನಟ ಫವಾದ್ ಖಾನ್ (ಸಂಗ್ರಹ)
ನವದೆಹಲಿ: ಪಾಕಿಸ್ತಾನದ ನಟ ಫವಾದ್ ಖಾನ್ ನಟಿಸಿರುವ ಬಾಲಿವುಡ್ ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ಅವರ ಬಹು ನಿರೀಕ್ಷಿತ ಚಿತ್ರ ಏ ದಿಲ್ ಹೈ ಮುಷ್ಕಿಲ್ ಗೆ ಅಡ್ಡಿ, ಆತಂಕ ಕೊನೆಗೊಳ್ಳುತ್ತಿರುವಂತೆ ಕಾಣುತ್ತಿಲ್ಲ. ಕೆಲವು ಥಿಯೇಟರ್ ಮಾಲಿಕರು ಚಿತ್ರದ ಬಿಡುಗಡೆಯಿಂದ ಹಿಂದಕ್ಕೆ ಸರಿಯುತ್ತಿದ್ದಾರೆ ಎಂದು ಇತ್ತೀಚಿನ ವರದಿಗಳು ಹೇಳುತ್ತಿವೆ.
ವಾಹಿನಿಯೊಂದರಲ್ಲಿ ಬಂದಿರುವ ವರದಿ ಪ್ರಕಾರ, ಪಾಕಿಸ್ತಾನಿ ನಟ ಈ ಚಿತ್ರದಲ್ಲಿ ನಟಿಸಿರುವುದರಿಂದ ಚಿತ್ರವನ್ನು ಬಿಡುಗಡೆ ಮಾಡಲು ಥಿಯೇಟರ್ ಮಾಲೀಕರು ನಿರಾಕರಿಸುತ್ತಿದ್ದಾರೆ. ''ನಾವು ಈ ಚಿತ್ರವನ್ನು ಬಿಡುಗಡೆ ಮಾಡದಿರಲು ನಿರ್ಧರಿಸಿದ್ದೇವೆ. ಅಲ್ಲದೆ ಪಾಕಿಸ್ತಾನ ನಮ್ಮ ಚಿತ್ರಗಳನ್ನು ನಿಷೇಧಿಸಿದ ನಂತರ ನಾವು ಪಾಕಿಸ್ತಾನದ ನಟರು, ತಂತ್ರಜ್ಞರನ್ನು ನಿಷೇಧಿಸಲು ನಿರ್ಧರಿಸಿದ್ದೇವೆ'' ಎನ್ನುತ್ತಾರೆ ಸಿನಿಮಾ ಮಾಲಿಕ ಒಕ್ಕೂಟದ ಅಧ್ಯಕ್ಷ ನಿತಿನ್ ದಾತಾರ್.
ಒಕ್ಕೂಟ ಇಂದಿನಿಂದ ಈ ನಿರ್ಧಾರ ತೆಗೆದುಕೊಂಡಿದ್ದು ವಿವಾದ ಸಹಜ ಸ್ಥಿತಿಗೆ ಬರುವವರೆಗೆ ನಿಯಮ ಅನ್ವಯವಾಗಲಿದೆ. ಒಕ್ಕೂಟದ ಅಡಿ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾ ರಾಜ್ಯಗಳು ಬರುತ್ತಿದ್ದು ಇಲ್ಲಿ ಕೂಡ ಕರಣ್ ಜೋಹರ್ ನಿರ್ದೇಶನದ ಚಿತ್ರ ಬಿಡುಗಡೆಯಾಗುತ್ತಿಲ್ಲ. ದೇಶದ ಜನರ ಹಿತಾಸಕ್ತಿಗೋಸ್ಕರ ಇತರ ರಾಜ್ಯಗಳು ಕೂಡ ನಮ್ಮ ನಿರ್ಧಾರವನ್ನು ಬೆಂಬಲಿಸುವಂತೆ ಕೇಳಿಕೊಳ್ಳುತ್ತೇವೆ ಎನ್ನುತ್ತಾರೆ ದಾತಾರ್.
ಇದು ಜಾರಿಗೆ ಬಂದರೆ ಬಾಕ್ಸಾಫೀಸಿನಲ್ಲಿ ಏ ದಿಲ್ ಹೆ ಮುಷ್ಕಿಲ್ ಸಿನಿಮಾ ಗಳಿಗೆ ಮೇಲೆ ಭಾರೀ ಹೊಡೆತ ಉಂಟಾಗಲಿದೆ. ಈ ಹಿಂದೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಚಿತ್ರದ ವಿರುದ್ಧ ಪ್ರಚಾರ ನಡೆಸಿತ್ತು.
ಕರಣ್ ಜೋಹರ್ ನಿರ್ದೇಶನದ ರಣಬೀರ್ ಕಪೂರ್, ಅನುಷ್ಕಾ ಶರ್ಮ, ಐಶ್ವರ್ಯಾ ರೈ ಅಭಿನಯದ ಏ ದಿಲ್ ಹೆ ಮುಷ್ಕಿಲ್ ಚಿತ್ರ ಅಕ್ಟೋಬರ್ 28ರಂದು ಬಿಡುಗಡೆಯಾಗಲಿದೆ.
ಕಳೆದ ಸೆಪ್ಟೆಂಬರ್ 18ರಂದು ಕಾಶ್ಮೀರದ ಉರಿಯಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 19 ಜನ ಸೈನಿಕರು ಮೃತಪಟ್ಟ ನಂತರ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನಿರ್ಮಾಣ ಸೇನೆ, ಪಾಕಿಸ್ತಾನದ ಕಲಾವಿದರು ಭಾರತ ಬಿಟ್ಟು ಹೋಗುವಂತೆ ಮತ್ತು ಭಾರತದಲ್ಲಿ ಪಾಕಿಸ್ತಾನದ ಕಲಾವಿದರ ಚಿತ್ರಗಳು ಬಿಡುಗಡೆ ಮಾಡದಂತೆ ಬೇಡಿಕೆಯಿಟ್ಟಿದ್ದರು.ನಂತರ ಭಾರತ ಮೋಷನ್ ಪಿಕ್ಚರ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ ನಿರ್ಧಾರವನ್ನು ಹೊರಡಿಸಿ ಭಾರತೀಯ ಚಿತ್ರಗಳಲ್ಲಿ ಪಾಕಿಸ್ತಾನದ ಕಲಾವಿದರು ನಟಿಸಬಾರದು ಎಂದು ನಿರ್ಣಯ ಹೊರಡಿಸಿದರು. ಅದಕ್ಕೆ ಪ್ರತಿಯಾಗಿ ಕೆಲವು ಪಾಕಿಸ್ತಾನ ಥಿಯೇಟರ್ ಮಾಲಿಕರು ಭಾರತೀಯ ಚಿತ್ರಗಳ ಪ್ರದರ್ಶನವನ್ನು ನಿಷೇಧಿಸಿದರು.
ಇತ್ತೀಚೆಗೆ ಪಾಕಿಸ್ತಾನದ ಖ್ಯಾತ ಸಂಗೀತಗಾರ ಶಫ್ಖತ್ ಅಮನತ್ ಆಲಿ ಮತ್ತು ಸಲ್ಮಾನ್ ಅಹ್ಮದ್ ಉರಿ ದಾಳಿಯನ್ನು ಖಂಡಿಸಿದ್ದು, ಎರಡೂ ದೇಶಗಳ ಪರಿಸ್ಥಿತಿ ಸಹಜತೆಗೆ ಬರಲು ಇದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಪಾಕಿಸ್ತಾನಿ ನಟ ಫವದ್ ಖಾನ್ ಸಾಮಾಜಿಕ ತಾಣದಲ್ಲಿ ಹೇಳಿಕೆ ಬಿಡುಗಡೆ ಮಾಡಿ ತಾವು ಶಾಂತಿಯುತ ಜಗತ್ತಿಗಾಗಿ ಪ್ರಾರ್ಥಿಸುವುದಾಗಿ ಹೇಳಿದ್ದಾರೆ.