ಆಂಬುಲೆನ್ಸ್ ನಲ್ಲಿ ಶಶಿ ಕಪೂರ್ ಪಾರ್ಥಿವ ಶರೀರ
ಮುಂಬೈ: 70 ಹಾಗೂ 80ರ ದಶಕದಲ್ಲಿ ಬಾಲಿವುಡ್‌ನ ರೊಮ್ಯಾಂಟಿಕ್ ಹೀರೋಗಳಲ್ಲಿ ಒಬ್ಬರಾಗಿದ್ದ ಬಾಲಿವುಡ್ ನಟ ಶಶಿ ಕಪೂರ್ ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ಸ್ಯಾಂಟಾಕ್ರೂಜ್ ಹಿಂದೂ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ಹಲವಾರು ವರ್ಷಗಳಿಂದ ಕಿಡ್ನಿ ಖಾಯಿಲೆಯಿಂದ ಬಳಲುತ್ತಿದ್ದ 79 ವರ್ಷದ ಶಶಿ ಕಪೂರ್ ಅವರು ಸೋಮವಾರ ಸಂಜೆ 5.20ಕ್ಕೆ ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಇಂದು ಭಾರಿ ಭದ್ರತೆಯೊಂದಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಇಂದು ಬೆಳಗ್ಗೆ 11.45ಕ್ಕೆ ಶಶಿ ಕಪೂರ್ ಅವರ ಪಾರ್ಥಿವ ಶರೀರವನ್ನು ಅವರ ಜುಹು ನಿವಾಸದಿಂದ ಸ್ಯಾಂಟಾಕ್ರೂಜ್ ಹಿಂದೂ ರುದ್ರಭೂಮಿಗೆ ಆಂಬುಲೆನ್ಸ್ ಮೂಲಕ ತರಲಾಯಿತು. ಅವರ ಪುತ್ರರಾದ ಕುನಲ್, ಕರಣ್ ಹಾಗೂ ಪುತ್ರಿ ಸಂಜನಾ ಸೇರಿದಂತೆ ಕಪೂರ್ ಕುಟುಂಬದ ಹಲವು ಸದಸ್ಯರು ಹಾಗೂ ಬಾಲಿವುಡ್ ನಟ, ನಟಿಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
'ಮೇರೆ ಪಾಸ್ ಮಾ ಹೈ' ಎಂಬ ಮಾತಿನಿಂದ ಬಾಲಿವುಡ್‌ನ ಸಿನಿಪ್ರಿಯರ ಮನದಲ್ಲಿ ಸದಾಕಾಲ ಉಳಿಯುವ ಮೋಹಕ ನಟ ಶಶಿಕಪೂರ್ ಇನ್ನು ಕೇವಲ ನೆನಪು ಮಾತ್ರ.