ಬಾಲಿವುಡ್

ಆಸ್ಕರ್ ರೇಸ್ ನಿಂದ ಹೊರಬಿದ್ದ ಭಾರತದ 'ನ್ಯೂಟನ್' ಚಿತ್ರ!

Srinivasamurthy VN
ವಾಷಿಂಗ್ಟನ್: ಭಾರತದಿಂದ ಅಧಿಕೃತವಾಗಿ ಆಸ್ಕರ್ ಪ್ರಶಸ್ತಿ ಪಟ್ಟಿಗೆ ಸೇರುವ ಮೂಲಕ ವಿಶ್ವಾಸ ಮೂಡಿಸಿದ್ದ ರಾಜ್ ಕುಮಾರ್ ರಾವ್ ಅಭಿನಯದ ನ್ಯೂಟನ್ ಚಿತ್ರ ಇದೀಗ ಪ್ರಶಸ್ತಿ ರೇಸ್ ನಿಂದ ಹೊರಬಿದ್ದಿದೆ.
ಈ ಬಗ್ಗೆ ಸ್ವತಃ ಆಸ್ಕರ್ ಆಯ್ಕೆ ಸಮಿತಿ ಮಾಹಿತಿ ನೀಡಿದ್ದು, ಭಾರತದ ನ್ಯೂಟನ್ ಚಿತ್ರ ಆಸ್ಕರ್ ಪ್ರಶಸ್ತಿ ರೇಸ್ ನಲ್ಲಿರುವ ಒಂಭತ್ತು ಚಿತ್ರಗಳ ಪಟ್ಟಿಯಲ್ಲಿ ಇಲ್ಲ ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ ಆಸ್ಕರ್ ಪ್ರಶಸ್ತಿಯ ಮುಂದಿನ  ಹಂತಕ್ಕೆ ಒಟ್ಟು 9 ಚಿತ್ರಗಳನ್ನು ಮುನ್ನಡೆದಿದ್ದು, ಚಿಲಿ ಮೂಲದ ಎ ಫೆಂಟಾಸ್ಟಿಕ್ ವುಮನ್, ಜರ್ಮನಿಯ ಇನ್ ದಿ ಫೇಡ್, ಹಗೇರಿಯ  ಆನ್ ಬಾಡಿ ಅಂಡ್ ಸೋಲ್, ಇಸ್ರೇಲ್ ನ ಫಾಕ್ಸ್ ಟ್ರಾಟ್, ಲೆಬೆನಾನ್ ನ ದಿ ಇನ್ಸಲ್ಟ್, ಸ್ವೀಡನ್ ನ  ದಿ ಸ್ಕ್ವೇರ್, ಸೆನೆಗಲ್ ನ ಫೆಲಿಸಿಟ್, ರಷ್ಯಾದ ಲವ್ ಲೆಸ್ ಮತ್ತು ದಕ್ಷಿಣ ಆಫ್ರಿಕಾದ ದಿ ವೌಂಡ್ ಚಿತ್ರಗಳು ಮುಂದಿನ ಹಂತಕ್ಕೆ ಆಯ್ಕೆಯಾಗಿವೆ ಎಂದು ತಿಳಿದುಬಂದಿದೆ.
ಈವರೆಗೂ ಯಾವುದೇ ಭಾರತೀಯ ಚಿತ್ರ ಆಸ್ಕರ್ ಪ್ರಶಸ್ತಿ ಜಯಿಸಿಲ್ಲ. 2001ರಲ್ಲಿ ಅಮೀರ್ ಖಾನ್ ಅಭಿನಯದ ಲಗಾನ್ ಚಿತ್ರ ಪ್ರಶಸ್ತಿಯ ಅಂತಿಮ ಸುತ್ತು ಪ್ರವೇಶಿಸಿತ್ತಾದರೂ ಪ್ರಶಸ್ತಿಗೆ ಭಾಜನವಾಗಿರಲಿಲ್ಲ. ಇದಕ್ಕೂ ಮೊದಲು  ಮಿಸ್ಟರ್ ಇಂಡಿಯಾ (1958), ಸಲಾಂ ಬಾಂಬೇ (1989) ಚಿತ್ರಗಳು ಆಸ್ಕರ್ ಪ್ರಶಸ್ತಿಯ ಅಂತಿಮ ಸುತ್ತಿ ಪ್ರವೇಶಿಸಿದ್ದವು. ಕಳೆದ ವರ್ಷ ಖ್ಯಾತ ನಿರ್ದೇಶಕ ವೆಟ್ರಿಮಾರನ್ ನಿರ್ದೇಶನದ ವಿಸಾರಣೈ ಚಿತ್ರ ಆಸ್ಕರ್ ಪ್ರಶಸ್ತಿಗೆ  ಆಯ್ಕೆಯಾಗಿತ್ತು.
ಇನ್ನು ಮುಂಬರುವ ಜನವರಿ 23ರಂದು 90ನೇ ವಾರ್ಷಿಕ ಆಸ್ಕರ್ ಪ್ರಶಸ್ತಿ ಘೋಷಣೆಯಾಗಲಿದ್ದು, ಮಾರ್ಚ್ 4ರಂದು ಲಾಸ್ ಎಂಜಲೀಸ್ ನಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.
SCROLL FOR NEXT