ಚಂಡೀಘರ್: ಹೆಣ್ಣುಮಕ್ಕಳಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಉತ್ತೇಜನ ನೀಡಲು ಮತ್ತು ಹೆಣ್ಣುಮಕ್ಕಳ ಬಗ್ಗೆ ಧನಾತ್ಮಕ ಭಾವನೆ ಮೂಡಿಸಲು ಹರ್ಯಾಣದ ಕರ್ನಲ್ ಜಿಲ್ಲೆಯ ಜಿಲ್ಲಾಡಳಿತ, ನಾಲ್ಕು ಅಥವಾ ಹೆಚ್ಚು ಹೆಣ್ಣುಮಕ್ಕಳಿರುವ ಕುಟುಂಬಗಳಿಗೆ 'ದಂಗಲ್' ಸಿನೆಮಾದ ವಿಶೇಷ ಪ್ರದರ್ಶನವನ್ನು ಬುಧವಾರ ಆಯೋಜಿಸಿದೆ.
ನಾಲ್ಕು ಅಥವಾ ಅದಕ್ಕಿಂತಲೂ ಹೆಚ್ಚಿನ ಹೆಣ್ಣುಮಕ್ಕಳಿರುವ ೯೨೪ ಕುಟುಂಬಗಳನ್ನು ಗುರುತಿಸಲಾಗಿದೆ ಮತ್ತು ಅವರಿಗೆ ಸಿನೆಮಾದ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ ಎಂದು ಕರ್ನಲ್ ನ ಹೆಚ್ಚುವರಿ ಉಪ ಆಯುಕ್ತ ಪ್ರಿಯಾಂಕಾ ಸೋನಿ ಬುಧವಾರ ಹೇಳಿದ್ದಾರೆ.
ಚಂಢೀಘರ್ ನಿಂದ ೧೨೦ ಕಿಮೀ ದೂರದಲ್ಲಿರುವ ಕರ್ನಲ್ ಪಟ್ಟಣದ ಮಾಲ್ ಮಲ್ಟಿಪ್ಲೆಕ್ಸ್ ನಲ್ಲಿ ಪ್ರದರ್ಶನ ಏರ್ಪಡಿಸಲಾಗಿತ್ತು.
ಕುಸ್ತಿ ಪಟು ಮಹಾವೀರ್ ಸಿಂಗ್ ಫೋಗಟ್ ಮತ್ತು ಅವರ ಪುತ್ರಿಯರಾದ ಗೀತಾ ಫೋಗಟ್ ಮತ್ತು ಬಬಿತಾ ಫೋಗಟ್ ಅವರ ಜೀವನಗಾಥೆ 'ದಂಗಲ್' ಸಿನೆಮಾದ ಮುಖ್ಯಪಾತ್ರದಲ್ಲಿ ಅಮೀರ್ ಖಾನ್ ನಟಿಸಿದ್ದರು.
"ಈ ಸಿನೆಮಾ ಈ ಕುಟುಂಬಗಳಿಗೆ ಸ್ಫುರ್ತಿ ನೀಡಲಿದೆ" ಎಂದು ಸೋನಿ ಹೇಳಿದ್ದಾರೆ.
"ಮಾಲ್ ನಲ್ಲಿ ಮೊದಲ ಬಾರಿಗೆ ಈ ಸಿನೆಮಾ ನೋಡುತ್ತಿದ್ದ ಕೆಲವು ಬಾಲಕಿಯರು ಬಹಳ ಉತ್ಸುಕರಾಗಿದ್ದು ಕಂಡುಬಂತು ಮತ್ತು ಸಿನೆಮಾ ನೋಡಿದ ಮೇಲೆ ಸಂತಸ ವ್ಯಕ್ತಪಡಿಸಿದರು. ಸಿನೆಮಾ ನೋಡಿದ ಮೇಲೆ ಹೆಚ್ಚು ಶ್ರಮವಹಿಸಿ ಕೆಲಸ ಮಾಡುವುದು ತಿಳಿದು, ಓದಿನ ಜೊತೆಗೆ ಕ್ರೀಡೆಯಲ್ಲಿಯೂ ತೊಡಗಕಿಕೊಳ್ಳುವುದಾಗಿ ತಿಳಿಸಿದರು " ಎಂದು ಕೂಡ ಅವರು ಹೇಳಿದ್ದಾರೆ.
ಹರ್ಯಾಣದಲ್ಲಿ ಲಿಂಗ ಅನುಪಾತ ಬಹಳ ಕೆಟ್ಟ ಸ್ಥಿತಿಯಲ್ಲಿದ್ದು, ೧೦೦೦ ಪುರುಷರಿಗೆ ೮೭೯ ಮಹಿಳೆಯರಿದ್ದಾರೆ. ಅಧಿಕಾರಿಗಳ ಪ್ರಯತ್ನದಿಂದ ಈ ಅನುಪಾತ ೯೦೪ ಕ್ಕೆ ಕಳೆದ ವರ್ಷ ವೃದ್ಧಿಸಿತ್ತು.