ದಂಗಲ್ ಸಿನೆಮಾದಲ್ಲಿ ಅಮೀರ್ ಖಾನ್ ಮತ್ತು ಸಹನಟರು
ಮುಂಬೈ: ಅಮೀರ್ ಖಾನ್ ಮುಖ್ಯ ಪಾತ್ರದಲ್ಲಿ ನಟಿಸಿರುವ 'ದಂಗಲ್' ಸಿನೆಮಾ, ನಿರೂಪಣೆಯಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದೆ ಎಂಬ ಆರೋಪವನ್ನು ಚಲನಚಿತ್ರ ಪ್ರಾಮಾಣಿಸುವ ಕೇಂದ್ರ ಸಮಿತಿ (ಸಿ ಎಫ್ ಬಿ ಸಿ) ಅಧ್ಯಕ್ಷ ಪಹ್ಲಜ್ ನಿಹಲಾನಿ ಅಲ್ಲಗೆಳೆದಿದ್ದಾರೆ.
ಜೈ ಹೊ ಫೌಂಡೇಶನ್ ಎಂಬ ಹೆಸರಿನ ಸಂಸ್ಥೆ ಸಿನೆಮಾದಲ್ಲಿ ರಾಷ್ಟ್ರಗೀತೆಯನ್ನು ಬಳಸಿರುವುದಕ್ಕ ಆಕ್ಷೇಪ ವ್ಯಕ್ತಪಡಿಸಿ ಸೆನ್ಸಾರ್ ಮಂಡಳಿಗೆ ವಿವರಣೆಗಾಗಿ ಪತ್ರ ಬರೆದಿತ್ತು.
ಈ ಪತ್ರಕ್ಕೆ ಪ್ರತಿಕ್ರಿಯಿಸಿರುವ ನಿಹಲಾನಿ "ಹೌದು, ನಮಗೆ ಸಂಸ್ಥೆಯಿಂದ ಪತ್ರ ಬಂದಿದೆ. ಸಿನೆಮಾದಲ್ಲಿ ರಾಷ್ಟ್ರಗೀತೆಯನ್ನು ತಪ್ಪಾಗಿ ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ನಾನು ವೈಯಕ್ತಿಕವಾಗಿ 'ದಂಗಲ್' ಸಿನೆಮಾ ನೋಡಿಲ್ಲ. ಆದರೆ ಸೆನ್ಸಾರ್ ಮಂಡಳಿಯ ಸದಸ್ಯರು ಸಿನೆಮಾ ನೋಡಿ, ಪ್ರಾಮಾಣಿಕವಾಗಿ ರಾಷ್ಟ್ರೀಯತೆಯನ್ನು ಪ್ರದರ್ಶಿಸುತ್ತಿರುವುದಾಗಿ ಹೇಳಿದ್ದಾರೆ. ಸಿನೆಮಾದಲ್ಲಿ ರಾಷ್ಟ್ರಗೀತೆ ಬಂದಾಗ ಎಲ್ಲರು ಎದ್ದುನಿಲ್ಲುತ್ತಿರುವುದಾಗಿ ನನಗೆ ತಿಳಿದುಬಂದಿದೆ" ಎಂದು ಹೇಳಿದ್ದಾರೆ.
ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಡಲಾಗಿದೆ ಎಂಬ ಆರೋಪಕ್ಕೆ " ನಾವು ಸೆನ್ಸಾರ್ ಮಂಡಳಿಯ ಸದಾಸ್ಯರು ಎಂದಿಗೂ ರಾಷ್ಟ್ರಗೀತೆಗೆ ಅಗೌರವ ತೋರಲು ಬಿಡುವುದಿಲ್ಲ" ಎಂದಿದ್ದಾರೆ.
ಹಾಗೆಯೇ ರಾಷ್ಟ್ರಗೀತೆಯನ್ನು ಸಿನೆಮಾದಲ್ಲಿ ಬಳಸಿರುವ ಸಮಯದ ಬಗ್ಗೆ ಪ್ರತಿಕ್ರಿಯಿಸಿರುವ ನಿಹಲಾನಿ "ಕಾಮನ್ ವೆಲ್ತ್ ಕ್ರೀಡೆಗಳಲ್ಲಿ ಭಾರತ ಗೆದ್ದ ಸಮಯದಲ್ಲಿ ರಾಷ್ಟ್ರಗೀತೆ ಬರುತ್ತದೆ ಎಂದು ನಾನು ತಿಳಿದಿದ್ದೇನೆ. ಇನ್ಯಾವುದೇ ದೇಶ ಗೆದ್ದಿದ್ದಾರೆ, ಆ ದೇಶದ ರಾಷ್ಟ್ರಗೀತೆಯನ್ನು ನುಡಿಸಲಾಗುತ್ತಿತ್ತು. ಸಿನೆಮಾ ವಿವಿಧ ಸಾಧ್ಯತೆಗನ್ನು ಅಳವಡಿಸಿಕೊಳ್ಳಲು ಸಾಧ್ಯವಿರುವ ಮಾಧ್ಯಮ. ಇತ್ತೀಚಿನ ದಿನಗಳಲ್ಲಿ 'ದಂಗಲ್' ಬಹಳ ರಾಷ್ಟ್ರಪ್ರೇಮದ ಸಿನೆಮಾ. ರಾಷ್ಟ್ರೀಯ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪ ತಪ್ಪು" ಎಂದಿದ್ದಾರೆ.