ನಟಿ ದೀಪಿಕಾ ಪಡುಕೋಣೆ ಮತ್ತು ವಿನ್ ಡೀಸೆಲ್
ಅಮೆರಿಕಾದ ಖ್ಯಾತ ನಟಿ, ಸಂದರ್ಶಕಿ ಎಲ್ಲೆನ್ ಡಿಜನರಸ್ ಟಾಕ್ ಶೋನಲ್ಲಿ ನಿನ್ನೆಯಷ್ಟೇ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮಾತನಾಡಿದ್ದಾರೆ.
ಚಿತ್ರದಲ್ಲಿ ನಿಮ್ಮ ಮತ್ತು ವಿನ್ ಡೀಸೆಲ್ ಮಧ್ಯೆ ಕೆಮಿಸ್ಟ್ರಿ ಚೆನ್ನಾಗಿದೆ, ಏನಿದರ ರಹಸ್ಯ ಎಂದು ಡಿಜನರಸ್ ಕೇಳಿದ್ದಕ್ಕೆ ಹೌದು, ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ. ನನಗೆ ವಿನ್ ಡೀಸೆಲ್ ಜೊತೆ ಕ್ರಷ್ ಆಗಿದೆ, ನಾವಿಬ್ಬರೂ ಜೊತೆಯಾಗಿ ವಾಸಿಸುತ್ತಿದ್ದೇವೆ, ನಮಗೆ ಸುಂದರವಾದ ಮಕ್ಕಳಾಗಿದ್ದಾರೆ. ಆದರೆ ಅವೆಲ್ಲವೂ ನನ್ನ ತಲೆಯಲ್ಲದೆಯಷ್ಟೆ. ಅಂದರೆ ನಾನು ಹಾಗೆ ಯೋಚಿಸುತ್ತೇನೆ ಎಂದರ್ಥ. ಅದರಿಂದಾಗಿ ಚಿತ್ರದಲ್ಲಿ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್ ಆಗಿದೆ ಎಂಬರ್ಥದಲ್ಲಿ ದೀಪಿಕಾ ಹೇಳಿದ್ದಾರೆ.
2002ರ ಎಕ್ಸ್ ಎಕ್ಸ್ ಎಕ್ಸ್ ಚಿತ್ರದ ಸರಣಿ ಚಿತ್ರ 3 ಎಕ್ಸ್: ರಿಟರ್ನ್ ಆಫ್ ಕ್ಸೇಂಡರ್ ಕೇಜ್ ಆಗಿದ್ದು ದೀಪಿಕಾ ಪಡುಕೋಣೆಗೆ ಇದು ಚೊಚ್ಚಲ ಹಾಲಿವುಡ್ ಚಿತ್ರ. ಅಮೆರಿಕಕ್ಕಿಂತ ಮೊದಲು ಭಾರತದಲ್ಲಿ ಈ ಚಿತ್ರ ಬಿಡುಗಡೆಯಾಗಿದ್ದು ಅದಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.
ಚಿತ್ರಕ್ಕೆ ತಮ್ಮ ಪ್ರವೇಶದ ಬಗ್ಗೆ ಮಾತನಾಡಿದ ದೀಪಿಕಾ, ಕೊನೆಯ ಕ್ಷಣದವರೆಗೂ ತಮಗೆ ಚಿತ್ರದಲ್ಲಿ ಯಾವ ಪಾತ್ರವಿದೆ, ಹೇಗಿದೆ ಎಂಬ ಕಲ್ಪನೆಯೇ ಇರಲಿಲ್ಲವಂತೆ.
ದೀಪಿಕಾ ಎರಡು-ಮೂರು ವರ್ಷಗಳ ಹಿಂದೆ ಫ್ಯೂರಿಯಸ್ ಆಡಿಷನ್ ಗೆ ಹೋಗಿದ್ದರಂತೆ. ಆದರೆ ಯಾವುದೋ ಕಾರಣಕ್ಕೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ಜನರಿಗೆ ಅದಿನ್ನೂ ನೆನಪಿರಬಹುದು. ಒಂದು ವರ್ಷದ ಹಿಂದೆ ಪಾರಮೌಂಟ್ ಕಂಪೆನಿ ಕಡೆಯಿಂದ ನನಗೊಂದು ಕರೆ ಬಂತು. ನನ್ನನ್ನು ಈ ಪಾತ್ರಕ್ಕೆ ಹಾಕಿಕೊಳ್ಳುತ್ತಾರೆಂದು. ಕೂಡಲೇ ನಾನು ಹೋಗಿ ನಿರ್ದೇಶಕ ಡಿಜೆ ಕಾರುಸೊ ಅವರನ್ನು ಭೇಟಿಯಾದೆ. ನಂತರ ಲಾಸ್ ಏಂಜಲೀಸ್ ನಲ್ಲಿ ವಿನ್ ಡೀಸೆಲ್ ಸಿಕ್ಕಿದರು. ನಾನಾಗ ಟೊರೆಂಟೊದಲ್ಲಿದ್ದೆ. ಅದೃಷ್ಟವಶಾತ್ ವೀಸಾ ಸಿಕ್ಕಿ ಲಾಸ್ ಏಂಜಲಿಸ್ ಗೆ ಹೋದೆ. ಅಲ್ಲಿ 45 ನಿಮಿಷಗಳ ಫೋಟೋ ಶೂಟ್ ಮಾಡಿಸಿದರು. ನನಗೆ ಒಂದು ಕ್ಷಣ ಏನು ನಡೆಯುತ್ತಿದೆ ಎಂದು ಗೊತ್ತಾಗುತ್ತಿರಲಿಲ್ಲ. ಆ ವೇಳೆಗೂ ನಾನು ಚಿತ್ರದ ಭಾಗವಾಗಿದ್ದೇನೆಯೋ ಇಲ್ಲವೋ ಎಂದು ಗೊತ್ತಿರಲಿಲ್ಲ. ನಂತರ ವಿನ್ ಡೀಸೆಲ್ ನಮ್ಮ ಫೋಟೋ ಶೂಟ್ ನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದಾಗಲೇ ಗೊತ್ತಾಗಿದ್ದು ಎಂದು ದೀಪಿಕಾ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಒಪ್ಪವಾದ ಬಿಳಿ ಸೂಕ್ಷ್ಮ ಉಡುಪನ್ನು ಧರಿಸಿದ್ದ ದೀಪಿಕಾ ಜೊತೆಗಿನ ಟಾಕ್ ಶೋ ಅಮೆರಿಕದಲ್ಲಿ ನಿನ್ನೆ ಪ್ರಸಾರವಾಗಿದ್ದರೆ ಭಾರತದಲ್ಲಿ ಇಂದು ಪ್ರಸಾರವಾಗುತ್ತದೆ.