'ಥಗ್ಸ್ ಆಫ್ ಹಿಂದೋಸ್ತಾನ್' ಸಿನೆಮಾದ ಪೋಸ್ಟರ್
ಮುಂಬೈ: 'ಥಗ್ಸ್ ಆಫ್ ಹಿಂದೋಸ್ತಾನ್' ಸಿನೆಮಾದ ಚಿತ್ರೀಕರಣದಲ್ಲಿ ನಿರತರಾಗಿರುವ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್, ಈ ಸಿನೆಮಾ ಒರಟು ಮತ್ತು ಗಟ್ಟಿಯಾದದ್ದು ಎಂದು ಬಣ್ಣಿಸಿದ್ದಾರೆ.
ಮಂಗಳವಾರ ಟ್ವೀಟ್ ಮಾಡಿರುವ ಅಮಿತಾಬ್ "'ಥಗ್ಸ್ ಆಫ್ ಹಿಂದೋಸ್ತಾನ್' ಕೆಲಸದಿಂದ ಹಿಂದಿರುಗಿದ್ದೇನೆ... ಇದು ಒರಟು ಮತ್ತು ಗಟ್ಟಿ! ಆದರೆ ಹೀಗಿಲ್ಲದೆ ಎಂದಾದರೂ ಯಾರಾದರೂ ಏನನ್ನಾದರೂ ಗಳಿಸಿದ್ದಾರೆಯೇ" ಎಂದು ಬರೆದಿದ್ದಾರೆ.
ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ 'ಥಗ್ಸ್ ಆಫ್ ಹಿಂದೋಸ್ತಾನ್' ಚಿತ್ರೀಕರಣ ಕಳೆದ ತಿಂಗಳು ಪ್ರಾರಂಭವಾಗಿತ್ತು. ಈ ಸಿನೆಮಾದಲ್ಲಿ ಅಮೀರ್ ಖಾನ್, ಕತ್ರಿನಾ ಕೈಫ್ ಮತ್ತು 'ದಂಗಾಲ್' ಖ್ಯಾತಿಯ ಫಾತಿಮಾ ಸನ ಶೇಕ್ ಕೂಡ ನಟಿಸುತ್ತಿದ್ದಾರೆ.
'ಕನ್ಫೆಶನ್ಸ್ ಆಫ್ ಎ ಥಗ್' ಎಂಬ ೧೮೩೯ರ ಕಾದಂಬರಿಯ ಸಿನೆಮಾ ಅಡವಳಿಗೆ ಇದಾಗಿದ್ದು, ೨೦೧೮ ರ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗಲಿದೆ.
ಯಶರಾಜ್ ಫಿಲಂಸ್ ಸಂಸ್ಥೆಯ ಈ ಯೋಜನೆ ಮೊದಲ ಬಾರಿಗೆ ಅಮೀರ್ ಖಾನ್ ಮತ್ತು ಅಮಿತಾಬ್ ಬಚ್ಚನ್ ಅವರನ್ನು ತೆರೆಯ ಮೇಲೆ ಒಟ್ಟಿಗೆ ಮೂಡಿಸಲಿದೆ.
೭೪ ವರ್ಷದ ಖ್ಯಾತ ನಟ '೧೦೨ ನಾಟ್ ಔಟ್' ಸಿನೆಮಾದಲ್ಲಿ ಮತ್ತೊಬ್ಬ ಖ್ಯಾತ ಹಿರಿಯ ನಟ ರಿಷಿ ಕಪೂರ್ ಅವರೊಂದಿಗೆ ನಟಿಸಲಿದ್ದಾರೆ. ಈ ಇಬ್ಬರೂ ನಟರು ಬಾಲಿವುಡ್ ನಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ್ದಾರೆ.