ಕೇಸರಿ ಅವತಾರದಲ್ಲಿ ಅಕ್ಷಯ್ ಕುಮಾರ್
ಸತಾರಾ(ಮಹಾರಾಷ್ಟ್ರ): ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ’ಕೇಸರಿ’ ಚಿತ್ರೀಕರಣ ಸೆಟ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.
ಮಹಾರಾಷ್ಟ್ರದ ಸತಾರಾ ಜಿಲ್ಲೆ ವೈ ತೆಹಸಿಲ್‍ನ ಪಿಂಪೋಡೆ ಬುದ್ರಕ್ ಗ್ರಾಮದಲ್ಲಿ ನಡೆಯುತ್ತಿದ್ದ ಚಿತ್ರೀಕರಣದ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಸತಾರಾ ಪೊಲೀಸ್ ನಿಯಂತ್ರಣ ಕೊಠಡಿ ಅಧಿಕಾರಿಗಳು ಹೇಳಿದ್ದಾರೆ.
ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣದ ವೇಳೆ ಬಾಂಬ್ ಗಳನ್ನು ಬಳಸಲಾಗಿತ್ತು. ಬಾಂಬ್ ಸ್ಫೋಟದ ವೇಳೆ ಬೆಂಕಿಯ ಕಿಡಿಯೊಂಡು ಸೆಟ್ ನಲ್ಲಿದ್ದ ವಸ್ತುವಿಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ.
ನಾಯಕ ನಟ ಅಕ್ಷಯ್ ಕುಮಾರ್ ತಮ್ಮ ಪಾಲಿನ ಚಿತ್ರೀಕರಣ ಮುಗಿಸಿ ತೆರಳಿದ್ದ ನಂತರದಲ್ಲಿ ಈ ಘಟನೆ ನಡೆದಿದೆ. ಅವಘಡದ ಬಗೆಗೆ ಅಕ್ಷಯ್ ಕುಮಾರ್ ಅಥವಾ ’ಕೇಸರಿ’ ಚಿತ್ರತಂಡ ಯಾವ ಪ್ರತಿಕ್ರಿಯೆ ನೀಡಿಲ್ಲ.
1897ನಲ್ಲಿ ನಡೆದ ಯುದ್ಧದಲ್ಲಿ 21 ಸಿಖ್ ಧರ್ಮದವರು 10 ಸಾವಿರ ಅಫ್ಘಾನ್ ಮಂದಿಯ ಜೊತೆ ಹೋರಾಡಿದ ಘಟನೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಈ ಚಿತ್ರ ತಯಾರಾಗುತ್ತಿದೆ. ಅನುರಾಗ್ ಸಿಂಗ್ ನಿರ್ದೇಶನದ ಈ ಚಿತ್ರಕ್ಕೆ ಪರಿಣೀತಿ ಚೋಪ್ರಾ ನಾಯಕಿಯಾಗಿದ್ದಾರೆ. ಧರ್ಮ ಪ್ರೊಡಕ್ಷನ್, ಕೇಪ್ ಆಫ್ ಗುಡ್ ಫಿಲ್ಮ್ಸ್ ಹಾಗೂ ಅಝೂರ್ ಎಂಟರ್ ಟೈನ್‍ಮೆಂಟ್ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ತೊಡಗಿಸಿದೆ.