ಪಣಜಿ: ಹೇಟ್ ಸ್ಟೋರಿ 3, ವೀರ್ ಸೇರಿ ಅನೇಕ ಜನಪ್ರಿಯ ಚಿತ್ರಗಳ ನಾಯಕಿ ಝರೀನ್ ಖಾನ್ ಗೆ ಸೇರಿದ್ದ ಕಾರೊಂದು ಗುದ್ದಿದ ಕಾರಣ ಸ್ಕೂಟರ್ ಸವಾರನೊಬ್ಬ ಸಾವನ್ನಪ್ಪಿರುವ ಘಟನೆ ಗೋವಾದಲ್ಲಿ ನಡೆದಿದೆ.
ಬುಧವಾರ ಸಂಜೆ ಗೋವದ ಅಂಜುನಾ ಬೀಚ್ ಗ್ರಾಮದಲ್ಲಿ ನಡೆದ ಅಪಘಾತದಲ್ಲಿ ಮಾಪುಸಾ ನಗರ ನಿವಾಸಿಯಾದ ನಿತೇಶ್ ಗೋರಲ್ (31) ಸಾವನ್ನಪ್ಪಿದ್ದಾನೆ ಎಂದು ಪೋಲೀಸರು ಮಾಹಿತಿ ನೀಡಿದರು.
ಸ್ಕೂಟರ್ ಸವಾರ ನಟಿಯ ಕಾರಿಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದನು. ಆತನನ್ನು ಮಾಪುಸಾದ ಅಸಿಲೊ ಆಸ್ಪತ್ರೆಗೆ ದಾಖಲಿಸಿದ್ದರಾದರೂ ಗಂಬೀರ ಗಾಯಗಳಾಗಿದ್ದ ಕಾರಣ ನಿತೇಶ್ ಸಾವಿಗೀಡಾಗಿದ್ದಾನೆ.ಇದೇ ವೇಳೆ ನಟಿ ಝರೀನ್ ಖಾನ್ ಗೆ ಸಹ ಸಣ್ಣ ಪುಟ್ಟ ಗಾಯಗಳಾಗಿದೆ.
ಸ್ಕೂಟರ್ ಚಾಲನೆ ವೇಳೆ ನಿತೇಶ್ ಹೆಲ್ಮೆಟ್ ಧರಿಸಿರಲಿಲ್ಲ ಎನ್ನಲಾಗಿದೆ. ಅಪಘಾತದ ವೇಳೆ ಝರೀನ್ ಖಾನ್ ಹಾಗೂ ಆಕೆಯ ಕಾರ್ ಚಾಲಕ ಅಲಿ ಅಬ್ಬಾಸ್ ಉಪಸ್ಥಿತರಿದ್ದರು.ಇದೀಗ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.ಸಿಸಿ ಟಿವಿ ದೃಶ್ಯ ಹಾಗೂ [ರತ್ಯಕ್ಷದರ್ಶಿಗಳ ಹೇಳಿಕೆ ಆಧಾರದಲ್ಲಿ ತನಿಖೆ ಮುಂದುವರಿಯಲಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಅಂಜುನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ ಅಪಘಾತ ನಡೆದಿದೆ.