ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಜೀವನಾಧಾರಿತ ಚಿತ್ರ 'ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಬಿಡುಗಡೆಗೆ ನಿಷೇಧ ಹೇರುವುದಿಲ್ಲಎಂದು ಕಾಂಗ್ರೆಸ್ ನೇತೃತ್ವದ ಮಧ್ಯ ಸರ್ಕಾರ ಶುಕ್ರವಾರ ಸ್ಪಷ್ಟಪಡಿಸಿದೆ.
ರಾಜ್ಯದಲ್ಲಿ 'ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಚಿತ್ರಕ್ಕೆ ನಿಷೇಧ ಹೇರುವ ಕುರಿತು ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈ ಕುರಿತ ಮಾಧ್ಯಮಗಳ ವರದಿ ಆಧಾರ ರಹಿತ ಎಂದು ಮಧ್ಯ ಸರ್ಕಾರದ ಸಾರ್ವಜನಿಕ ಸಂಪರ್ಕ ಇಲಾಖೆ ಟ್ವೀಟ್ ಮಾಡಿದೆ.
ಮನಮೋಹನ್ ಸಿಂಗ್ ಮಾಧ್ಯಮ ಸಲಹೆಗಾರ ಸಂಜಯ್ ಬಾರು ಅವರ ಪುಸ್ತಕ ಆಧಾರಿತ 'ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಚಿತ್ರಕ್ಕೆ ರಾಜ್ಯದಲ್ಲಿ ನಿಷೇಧ ಹೇರಲಾಗಿದೆ ಎಂದು ಈ ಮುಂಚೆ ಮಾಧ್ಯಮಗಳು ವರದಿ ಮಾಡಿದ್ದವು,
ಚಿತ್ರದಲ್ಲಿ ಸತ್ಯಗಳನ್ನು ಮರೆಮಾಚಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಲ್ಲದೆ ಚಿತ್ರ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಚಿತ್ರವನ್ನು ಬಿಜೆಪಿ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಅಲ್ಲದೆ, ಬಿಜೆಪಿ ಈ ಚಲನಚಿತ್ರಕ್ಕೆ ಹಣಕಾಸು ನೀಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
'ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' 2019ರ ಜನವರಿ 11ರಂದು ದೇಶಾದ್ಯಂತ ತೆರೆ ಕಾಣಲಿದೆ.
ಈ ಚಿತ್ರದ ಕಥಾ ವಸ್ತು ಯುಪಿಎ ಆಡಳಿತದ ಅವಧಿಯಲ್ಲಿ 2004ರಿಂದ 2014ರ ವರೆಗೆ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ಅವರನ್ನು ಕುರಿತದ್ದಾಗಿದೆ.