ಬಾಲಿವುಡ್

ವಿವಿಧ ರಾಜ್ಯಗಳಲ್ಲಿ 'ಪದ್ಮಾವತ್'ಗೆ ನಿಷೇಧ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ನಿರ್ಮಾಪಕರು

Lingaraj Badiger
ನವದೆಹಲಿ: ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ವಿವಾದಾತ್ಮಕ ಬಾಲಿವುಡ್ ಚಿತ್ರ ಪದ್ಮಾವತ್ ಬಿಡುಗಡೆಗೆ ದೇಶದ ಹಲವು ರಾಜ್ಯಗಳಲ್ಲಿ ನಿಷೇಧ ಹೇರಲಾಗಿದ್ದು, ಇದನ್ನು ಪ್ರಶ್ನಿಸಿ ಚಿತ್ರ ನಿರ್ಮಾಪಕರು ಬುಧುವಾರ ಸುಪ್ರೀಂ ಕೋರ್ಟ್‍ ಮೊರೆ ಹೋಗಿದ್ದಾರೆ.
ಸೆನ್ಸರ್ ಮಂಡಳಿ ಅನುಮತಿ ನೀಡಿದ್ದರೂ ಸಿನಿಮಾವನ್ನು ತಡೆಯುವ ಹಕ್ಕು ಯಾವ ರಾಜ್ಯಕ್ಕೂ ಇಲ್ಲ. ತಮ್ಮ ಸಿನಿಮಾ ಎಲ್ಲಾ ರಾಜ್ಯಗಳಲ್ಲೂ ಬಿಡುಗಡೆಯಾಗುವಂತೆ ಅವಕಾಶ ನೀಡಬೇಕೆಂದು ನಿರ್ಮಾಪಕರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ.ಎಂ.ಖನ್ವಿಲ್ಕರ್ ಮತ್ತು ನ್ಯಾಯಮೂರ್ತಿ ಡಿವೈ ಚಂದ್ರಚೂಢ ಅವರನ್ನೊಳಗೊಂಡ ಸುಪ್ರೀಂ ಪೀಠ ಪ್ರಕರಣದ ವಿಚಾರಣೆಯನ್ನು ಗುರುವಾರ ನಡೆಸುವುದಾಗಿ ತಿಳಿಸಿದೆ.
ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಹಾಗೂ ಶಾಹಿದ್ ಕಪೂರ್ ಅಭಿನಯದ ಪದ್ಮಾವತಿ ಚಿತ್ರಕ್ಕೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸೆನ್ಸಾರ್ ಮಂಡಳಿ ಚಿತ್ರದ ಹೆಸರು ಪದ್ಮಾವತ್ ಎಂದು ಹಾಗೂ ಇತರೆ ಕೆಲ ಬದಲಾವಣೆ ಮಾಡಿದ ನಂತರ ಚಿತ್ರ ಬಿಡುಗಡೆಗೆ ಅನುಮತಿ ನೀಡಿದ್ದು, ಚಿತ್ರ ಜನವರಿ 25ರಂದು ದೇಶಾದ್ಯಂತ ತೆರೆ ಕಾಣುತ್ತಿದೆ. ಆದರೆ ರಾಜಸ್ಥಾನ, ಮಧ್ಯಪ್ರದೇಶ, ಹರಿಯಾಣ, ಹಿಮಾಚಲ ಪ್ರದೇಶ, ಗುಜರಾತ್ ರಾಜ್ಯಗಳಲ್ಲಿ ಸಿನಿಮಾಗೆ ನಿಷೇಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರ ನಿರ್ಮಾಪಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
SCROLL FOR NEXT