ಬಾಲಿವುಡ್ ನಟ ರಿಷಿ ಕಪೂರ್ ಪೂರ್ವಜರ ನಿವಾಸ
ಇಸ್ಲಾಮಾಬಾದ್: ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಅವರ ಪೂರ್ವಿಕರು ವಾಸವಿದ್ದ ಪಾಕಿಸ್ತಾನದ ಪೇಶಾವರದಲ್ಲಿರುವ ನಿವಾಸವನ್ನು ಮ್ಯೂಸಿಯಂ (ವಸ್ತು ಸಂಗ್ರಹಾಲಯ) ಆಗಿಸಲು ಪಾಕ್ ಸರ್ಕಾರ ಸಮ್ಮತಿಸಿದೆ. ನಟ ರಿಷಿ ಕಪೂರ್ ಅವರ ಬೇಡಿಕೆಯಂತೆ ಈ ಮನೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾಡುವುದಕ್ಕೆ ಅಲ್ಲಿನ ಸರ್ಕಾರ ಒಪ್ಪಿಗೆ ಸೂಚಿಸಿದೆ.
"ತಮ್ಮ ಪೂರ್ವಿಕರು ಬಾಳಿದ್ದ ಮನೆಯನ್ನು ವಸ್ತು ಸಂಗ್ರಹಾಲಯ ಅಥವಾ ಯಾವುದೇ ಸಂಸ್ಥೆಯನ್ನಾಗಿ ಪರಿವರ್ತಿಸಬೇಕು ಎಂದು ನಟ ಬಯಸಿದ್ದರು.ಪೇಶಾವರದ ಕಿಸ್ಸಾ ಖ್ವಾನಿ ಬಜಾರ್ ನಲ್ಲಿರುವ ಮನೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾಡಲು ಯೋಜನೆ ತಯಾರಿಸಲಾಗಿದೆ." ಪಾಕ್ ವಿದೇಶಾಂಗ ಸಚಿವ ಶಾ ಮಹಮ್ಮದ್ ಖುರೇಷಿ ಹೇಳಿದ್ದಾರೆ.
ಈ ಹಿಂದೆ ತಮ್ಮ ಪೂರ್ವಜರ ಮನೆಯನ್ನು ವಸ್ತು ಸಂಗ್ರಹಾಲಯ ಮಾಡುವ ಸಂಬಂಧ ರಿಷಿ ಕಪೂರ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಇದೀಗ ಪಾಕ್ ಕೇಂದ್ರ ಸರ್ಕಾರ ಹಾಗೂ ಪ್ರಾಂತೀಯ ಆಡಳಿತವು ಈ ಸಂಬಂಧ ಕಾರ್ಯನಿರ್ವಹಿಸುತ್ತಿದೆ.
ಬಾಲಿವುಡ್ ನಟ ಪ್ರಥ್ವೀರಾಜ್ ಕಪೂರ್ ಅವರ ತಂದೆ ಬಶೇಶ್ವರ ರಾವ್ ಈ ಮನೆಯನ್ನು ನಿರ್ಮಾಣ ಮಾಡಿದ್ದರು. ನಟ ಪ್ರಥ್ವಿರಾಜ್ ಕಪೂರ್ ಅವರ ಪುತ್ರ ರಾಜ್ ಕಪೂರ್1924ರಲ್ಲಿ ಇದೇ ಮನೆಯಲ್ಲಿ ಹುಟ್ಟಿದ್ದರು. ಸ್ವಾತಂತ್ರ ಬಳಿಕ ಭಾರತ ಪಾಕ್ ವಿಭಜನೆಯಾದಾಗ ಕಪೂರ್ ಕುಟುಂಬ ಪೇಶಾವರ ಬಿಟ್ಟು ಭಾರತಕ್ಕೆ ಬಂದಿತ್ತು.