ನವದೆಹಲಿ: ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ಧ ಬಾಲಿವುಡ್ ನಟಿ ತನುಶ್ರೀ ದತ್ತಾ ಲೈಂಗಿಕ ಕಿರುಕುಳ ಆರೋಪದ ನಂತರ ದೇಶದಲ್ಲಿ #MeToo ಅಭಿಯಾನ ಚುರುಕು ಪಡೆದಿದ್ದು ವಿವಿಧ ಕ್ಷೇತ್ರದ ಮಹಿಳೆಯರೂ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಬಿಚ್ಚಿಡುತ್ತಿದ್ದಾರೆ.
ಪತ್ರಕರ್ತೆ ಶೀನಾ ಎಂಬುವರು ಕಥೆಗಾರ ಚೇತನ್ ಭಗತ್ ಮಹಿಳೆಯೊಬ್ಬಳಿಗೆ ಕಳುಹಿಸಿದ ವಾಟ್ಸ್ಆ್ಯಪ್ ಸಂದೇಗಳನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಪ್ರಕಟಿಸಿ, ಲೈಂಗಿಕ ಕಿರುಕುಳದ ಆರೋಪಗಳ ಬಗ್ಗೆ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಇದೀಗ ಗಾಯಕಿ ಚಿನ್ಮಯಿ ತಮ್ಮ ಕಹಿ ಅನುಭವವನ್ನು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
ಆಗ ನನಗೆ 8 ಅಥವಾ 9 ವರ್ಷವಿರಬಹುದು. ಆಗ ನಾನು ನನ್ನು ತಾಯಿಯೊಂದಿಗೆ ಆಕೆ ಕೆಲಸ ಮಾಡುತ್ತಿದ್ದ ಜಾಗಕ್ಕೆ ಹೋಗುತ್ತಿದ್ದೆ. ಒಂದು ದಿನ ರಾತ್ರಿ ನಾನು ನನ್ನ ತಾಯಿ ಜೊತೆ ಮಲಗಿದ್ದಾಗ ವ್ಯಕ್ತಿಯೊರ್ವ ನನ್ನ ಮೈಮೇಲೆಲ್ಲ ಕೈಯಾಡಿಸಿದ್ದ ಕೊನೆಗೆ ನನ್ನ ಗುಪ್ತಾಂಗವನ್ನು ಸ್ಪರ್ಶಿಸಿದ್ದ ಎಂದು ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.
ಇದೇ ವೇಳೆ ತಾವು 19 ವರ್ಷದವಳಾಗಿದ್ದಾಗ 'ಗೌರವಾನ್ವಿತ ವ್ಯಕ್ತಿ' ಚೆನ್ನೈನಲ್ಲಿ ಸಂಗೀತ ಕಚೇರಿ ನಡೆಸಿಕೊಡುವಾಗ ನನ್ನ ರೂಮಿಗೆ ಕರೆಸಿಕೊಂಡು ನನ್ನನ್ನು ತಬ್ಬಿಕೊಂಡಿದ್ದರು. ಈ ವೇಳೆ ನಾನು ಕೋಪಗೊಂಡು ಗುಡ್ ಬಾಯ್ ಸರ್ ಎಂದು ಹೇಳಿ ಹೊರಬಂದಿದ್ದೆ ಎಂದು ಹೇಳಿದ್ದಾರೆ.