ಮುಂಬೈ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ತಮ್ಮ ಮುಂದಿನ ಚಿತ್ರ 'ಸೂಪರ್ 30' ನಿರ್ದೇಶಕ ವಿಕಾಸ್ ಬಹ್ಲ್ ಅವರು ತಪ್ಪು ಮಾಡಿದ್ದರೆ ನಿರ್ಮಾಪಕರು ಕಠಿಣ ನಿಲುವು ತೆಗೆದುಕೊಳ್ಳಬೇಕು ಎಂದು ಬಾಲಿವುಡ್ ನಟ ಹೃತಿಕ್ ರೋಷನ್ ಅವರು ಆಗ್ರಹಿಸಿದ್ದಾರೆ.
ವಿಕಾಸ್ ವಿರುದ್ಧದ ಆರೋಪದ ಬಗ್ಗೆ ತಮ್ಮ ಟ್ವಿಟ್ಟರ್ನಲ್ಲಿ ಬರೆದುಕೊಂಡಿರುವ ಹೃತಿಕ್ ರೋಷನ್, ಯಾರೇ ತಪ್ಪು ಮಾಡಲಿ, ಆರೋಪ ಸಾಬೀತಾದರೆ, ಅಗತ್ಯ ಪುರಾವೆಗಳಿದ್ದರೆ ಖಂಡಿತವಾಗಿ ಉಗ್ರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಅವಳು ಅಥವಾ ಅವನು ಅನುಚಿತ ವರ್ತನೆ ತೋರಿದವರೊಂದಿಗೆ ಕೆಲಸ ಮಾಡಲು ಸಾಧ್ಯವೇ ಇಲ್ಲ. ನಾನು ಅಂತವರಿಂದ ದೂರ ಇರಲು ಇಚ್ಚಿಸುತ್ತೇನೆ. ನಾನು ಸೂಪರ್ -30 ನಿರ್ಮಾಪಕರಲ್ಲಿ ವಿನಂತಿ ಮಾಡುತ್ತೇನೆ. ಸ್ಪಷ್ಟವಾದ ವಾಸ್ತವಾಂಶವಿದ್ದರೆ ಹಾಗೂ ಅಗತ್ಯ ಬಿದ್ದರೆ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯಬೇಡಿ . ಇಂತಹುದನ್ನ ಮುಚ್ಚಿಡದೆ ಗುಡಿಸಿ ಸ್ವಚ್ಛಗೊಳಿಸಬೇಕು. ಆರೋಪ ಸಾಬೀತಾದರೆ ಅಂತಹವರನ್ನ ಅವಶ್ಯವಾಗಿ ಶಿಕ್ಷಿಸಬೇಕು ಮತ್ತು ಯಾರೂ ಕಿರುಕುಳಕ್ಕೆ ಒಳಗಾಗಿದ್ದಾರೋ ಅಂತಹವರು ಮಾತನಾಡಲು ನಾವು ಬಲ ತುಂಬಬೇಕು ಎಂದು ಹೃತಿಕ ರೋಷನ್ ಟ್ವೀಟ್ ಮಾಡಿದ್ದಾರೆ.
ನಿನ್ನೆಯಷ್ಟೇ ಹೃತಿಕ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದ ಫಿಲ್ಮ್ ಮೇಕರ್ ಹನ್ಸಲ್ ಮೆಹ್ತಾ ಅವರು, ಬೆಹ್ಲ್ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಅವರೊಂದಿಗೆ ವ್ಯವಹರಿಸಲು ಭಯ ಪಡಬೇಕಾಗಿದೆ. ಆದರೆ ಇದಕ್ಕೆ ಪ್ರತಿಯಾಗಿ ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿರುವ ಪ್ರಮುಖ ನಟ ಅವರ ಚಿತ್ರದಲ್ಲಿ ಅಭನಯಿಸುತ್ತಿದ್ದಾರೆ. ಇಲ್ಲಿ ಯಾರು ಬಲಿಷ್ಠ? ಸಂತ್ರಸ್ಥೆ ಅಥವಾ ಆರೋಪಿ? ಎಂದು ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ಹೃತಿಕ್ ರೋಷನ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಹಿಂದೆ ಫಾಂಟಮ್ ಕಂಪನಿ ಮಾಜಿ ಸಿಬ್ಬಂದಿಯೊಬ್ಬರು ಬಹ್ಲ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು, ಮೀ ಟೂ ಅಭಿಯಾನ ಚುರುಕುಗೊಂಡ ಬಳಿಕ ನಟಿ ಕಂಗನಾ ರಣಾವತ್ ಕೂಡ ಅವರ ವಿರುದ್ಧ ಆರೋಪ ಮಾಡಿದ್ದು, ನನ್ನ ಕುತ್ತಿಗೆಯಲ್ಲಿ ಮುಖ ಹುದುಗಿಸಿ, ನನ್ನ ತಲೆಗೂದಲಿನ ವಾಸನೆ ಗ್ರಹಿಸುತ್ತಿದ್ದ ಬಹ್ಲ್, ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರು ಎಂದು ಆರೋಪಿಸಿದ್ದಾರೆ.
ಬಹ್ಲ್ ಅವರ ಈ ವರ್ತನೆ ನನಗೆ ಕಿರಿಕಿರಿಯುಂಟು ಮಾಡುತ್ತಿತ್ತು. ಹೀಗಾಗಿ ಫಾಂಟಮ್ ಕಂಪನಿಯ ಮಾಜಿ ಉದ್ಯೋಗಿ ಹೇಳಿದ್ದರಲ್ಲಿ ಸತ್ಯವಿದೆ ಎಂದಿದ್ದಾರೆ. ಸದ್ಯ ವಿಕಾಸ್ ಬಹ್ಲ್, ಹೃತಿಕ್ ರೋಷನ್ ನಟನೆಯ ಸೂಪರ್ 30 ಸಿನಿಮಾ ನಿರ್ದೇಶಿಸಿದ್ದು ಜನವರಿಯಲ್ಲಿ ತೆರೆಗೆ ಬರಲಿದೆ.