ಮುಂಬೈ: ಬಾಲಿವುಡ್ ನಟಿ ತನುಶ್ರೀ ದತ್ತ ಲೈಂಗಿಕ ಕಿರುಕುಳ ಆರೋಪದ ನಂತರ ದೇಶದಲ್ಲಿ #ಮಿ ಟೂ ಅಭಿಯಾನ ಚುರುಕು ಪಡೆಯುತ್ತಿದ್ದು, ಹಲವು ತಮ್ಮ ತಪ್ಪನ್ನು ಒಪ್ಪಿಕೊಂಡು ಬಹಿರಂಗವಾಗಿ ಕ್ಷಮೆ ಕೇಳುತ್ತಿದ್ದಾರೆ.
ನಿನ್ನೆಯಷ್ಟೇ ಖ್ಯಾತ ಕಾದಂಬರಿಕಾರ ಚೇತನ್ ಭಗತ್ ಅವರು ಮಹಿಳೆಯೊಬ್ಬರಿಗೆ ಮೋಹಿಸುವೆ ಎಂದು ವಾಟ್ಸ್ ಆಪ್ ಸಂದೇಶ ಕಳುಹಿಸಿದ್ದಕ್ಕೆ ಕ್ಷಮೆಯಾಚಿಸಿದ್ದರು. ಇದರ ಬೆನ್ನಲ್ಲೇ ಬಾಲಿವುಡ್ ನಿರ್ದೇಶಕ ಹಾಗೂ ನಟ ರಜತ್ ಕಪೂರ್ ಅವರು, ಸಂದರ್ಶನದ ವೇಳೆ ಮಹಿಳಾ ಪತ್ರಕರ್ತೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಮತ್ತು ಸುಳ್ಳು ಹೇಳಿದ್ದಕ್ಕೆ ಕ್ಷಮೆ ಯಾಚಿಸಿದ್ದಾರೆ.
ನಾನು ಒಳ್ಳೆಯ ಮನುಷ್ಯನಾಗಲು ಯತ್ನಿಸುತ್ತಿದ್ದೇನೆ. ಪತ್ರಕರ್ತೆಯೊಂದಿಗಿನ ನನ್ನ ವೃತ್ತಿಪರವಲ್ಲದ ನಡುವಳಿಕೆಗಾಗಿ ಮನಸ್ಪೂರ್ವಕವಾಗಿ ಕ್ಷಮೆ ಕೇಳುತ್ತೇನೆ ಎಂದು ರಜತ್ ಕಪೂರ್ ಅವರು ಟ್ಲೀಟ್ ಮಾಡಿದ್ದಾರೆ.
2007ರಲ್ಲಿ ನಾನು ರಜತ್ ಕಪೂರ್ ಅವರನ್ನು ಸಂದರ್ಶನ ಮಾಡಲು ಹೋದಾಗ ಅವರು ನನ್ನೊಂದಿಗೆ ನಡೆದುಕೊಂಡ ರೀತಿಯಿಂದಾಗಿ ನಾನು ತುಂಬಾ ಮುಜುಗರಕ್ಕಿಡಾಗಿದ್ದೇ ಎಂದು ಮಹಿಳಾ ಪತ್ರಕರ್ತೆ ಮಿ ಟೂ ಅಭಿಯಾನದಲ್ಲಿ ಹೇಳಿಕೊಂಡಿದ್ದರು.
ಬಳಿಕ ಟ್ವೀಟ್ ಮಾಡಿದ ರಜತ್ ಕಪೂರ್ ಅವರು, ನಾನು ಒಬ್ಬ ಯೋಗ್ಯ ಮನುಷ್ಯನಾಗಲು ಪ್ರಯತ್ನಿಸುತ್ತಿದ್ದೇನೆ. ಆದಾಗ್ಯೂ ನಾನು ಎಲ್ಲಾದರೂ ಎಡವಿದ್ದರೆ ಮತ್ತು ನನ್ನ ಕ್ರಿಯೆಗಳಿಂದ ಅಥವಾ ಪದಗಳಿಂದ ಯಾರಿಗಾದರೂ ನೋವು ಉಂಟು ಮಾಡಿದ್ದರೆ ಅಥವಾ ಆಘಾತವಾಗಿದ್ದರೆ "ನಾನು ನನ್ನ ಹೃದಯದಿಂದ ವಿಷಾದಿಸುತ್ತಿದ್ದೇನೆ - ಮತ್ತು ನಾನು ಇನ್ನೊಬ್ಬ ಮನುಷ್ಯನಿಗೆ ನೋವು ಉಂಟು ಮಾಡಿದೆ ಎಂಬ ದುಃಖ ನನ್ನನ್ನು ಕಾಡುತ್ತದೆ ಎಂದು ಬಾಲಿವುಡ್ ನಿರ್ದೇಶಕ ಹೇಳಿದ್ದಾರೆ.