ತನುಶ್ರೀ ದತ್ತ - ನಾನಾ ಪಾಟೇಕರ್
ಮುಂಬೈ: ಬಾಲಿವುಡ್ ನಟಿ ತನು ಶ್ರೀ ದತ್ತ ಅವರು ಬಯಸಿದರೆ ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಅವರ ವಿರುದ್ಧದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಮರು ತನಿಖೆ ನಡೆಸಲು ಸಿದ್ಧ ಎಂದು ಸಿನಿಮಾ ಮತ್ತು ಟಿವಿ ಕಲಾವಿದರ ಸಂಘ ಹೇಳಿದೆ.
2008ರಲ್ಲಿ ಹಾರ್ನ್ ಓಕೆ ಪ್ಲೀಸಸ್ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ನಾನಾ ಪಟೇಕರ್ ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ತನುಶ್ರೀ ದತ್ ಆರೋಪಿಸಿದ್ದರು. ಈ ಸಂಬಂಧ ನಟಿ ದಶಕದ ಹಿಂದೆಯೇ ಸಿನಿಮಾ ಮತ್ತು ಟಿವಿ ಕಲಾವಿದರ ಸಂಘದಲ್ಲಿ ದೂರು ದಾಖಲಿಸಿದ್ದರು. ಆದರೆ ಇತ್ತೀಚಿಗೆ ಆ ಪ್ರಕರಣ ಈಗ ಅಪ್ರಸ್ತುತ. ಸಹಾಯ ಮಾಡಲಾಗದು ಎಂದು ಕಲಾವಿದರ ಸಂಘ ಹೇಳಿತ್ತು.
ಈಗ ಯೂ ಟರ್ನ್ ಹೊಡೆದಿರುವ ಕಲಾವಿದರ ಸಂಘ, ತನುಶ್ರೀ ದತ್ತ ಮರು ತನಿಖೆ ಮಾಡುವಂತೆ ಕೇಳಿಕೊಂಡರೆ ಪಾರದರ್ಶಕ ತನಿಖೆ ನಡೆಸುತ್ತೇವೆ ಮತ್ತು ಅವರಿಗೆ ಎಲ್ಲಾ ರೀತಿಯ ಬೆಂಬಲ ನೀಡುತ್ತೇವೆ. ಆದರೆ ಅವರು ಇದುವರೆಗೆ ಅಧಿಕೃತವಾಗಿ ನಮ್ಮ ಬಳಿ ಬಂದಿಲ್ಲ. ಆದಾಗ್ಯೂ ನಾವು ಅವರೊಂದಿಗೆ ಮಾತನಾಡಿದ್ದೇವೆ ಮತ್ತು ಪತ್ರ ಬರೆದಿದ್ದೇವೆ ಎಂದು ಕಲಾವಿದರ ಸಂಘದ ಜಂಟಿ ಕಾರ್ಯದರ್ಶಿ ಅಮಿತ್ ಬೆಹ್ಲ್ ಹೇಳಿದ್ದಾರೆ.
ನಾವು ತನುಶ್ರೀ ಆರೋಪಕ್ಕೆ ಸಂಬಂಧಿಸಿದಂತೆ ನಾನಾ ಪಾಟೇಕರ್ ಅವರ ಅಭಿಪ್ರಾಯವನ್ನು ಪಡೆಯಬೇಕಾಗುತ್ತೆ. ಹೀಗಾಗಿ ಅವರಿಗೂ ಪತ್ರ ಬರೆದಿದ್ದೇವೆ ಎಂದು ಬೆಹ್ಲ್ ತಿಳಿಸಿದ್ದಾರೆ.