ಬಾಲಿವುಡ್

'ಶುಭಾಶಯಗಳಿಗೆ ಪ್ರತಿಕ್ರಿಯೆ ನೀಡಲು ಪದಗಳೇ ಸಿಗುತ್ತಿಲ್ಲ, ನಿಮ್ಮ ಉದಾರತೆಗೆ ನಾನು ವಿನಮ್ರ': ಅಮಿತಾಬ್ ಬಚ್ಚನ್ 

Sumana Upadhyaya

ಮುಂಬೈ: ಈ ಸಂದರ್ಭದಲ್ಲಿ ಕೃತಜ್ಞತೆ ಹೇಳಲು ನನಗೆ ಪದಗಳೇ ಸಾಲುತ್ತಿಲ್ಲ ಎಂದು 2018ರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಟ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹೇಳಿದ್ದಾರೆ.


ಸಿನಿಮಾರಂಗದಲ್ಲಿ 50 ವರ್ಷಗಳನ್ನು ಕಳೆದ 76 ವರ್ಷದ ಅಮಿತಾಬ್ ಬಚ್ಚನ್ ಅವರ ಸಾಧನೆ ಮತ್ತು ಕೊಡುಗೆಗಳನ್ನು ಮನ್ನಿಸಿ ಜೀವಮಾನದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದ್ದು ಎಲ್ಲೆಡೆಯಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಟ್ವೀಟ್ ಮಾಡಿದ ಬಚ್ಚನ್, ಈ ಸಂದರ್ಭದಲ್ಲಿ ಏನು ಹೇಳಬೇಕೊ ಗೊತ್ತಾಗುತ್ತಿಲ್ಲ, ನನಗೆ ಹರಿದುಬರುತ್ತಿರುವ ಶುಭಾಶಯಗಳು, ಔದಾರ್ಯದ ಮಾತುಗಳಿಗೆ ಪ್ರತಿಕ್ರಿಯೆ ನೀಡಲು ಪದಗಳ ಕೊರತೆ ಕಾಣುತ್ತಿದೆ. ಎಲ್ಲರ ಶುಭಹಾರೈಕೆ, ನುಡಿಗಳಿಗೆ ನಾನು ಕೃತಜ್ಞನಾಗಿದ್ದೇನೆ, ಅತ್ಯಂತ ವಿನಮ್ರನಾಗಿ ಮತ್ತು ಪ್ರಾಮಾಣಿಕತೆಯಿಂದ ಕೃತಜ್ಞತೆ ಹೇಳುತ್ತಿದ್ದೇನೆ ಎಂದಿದ್ದಾರೆ.


2017ರಲ್ಲಿ ಮತ್ತೊಬ್ಬ ಬಾಲಿವುಡ್ ನಟ ವಿನೋದ್ ಖನ್ನಾ ಅವರಿಗೆ ಮರಣೋತ್ತರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗಿತ್ತು. 
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಪ್ರಶಸ್ತಿಯನ್ನು ಪ್ರಕಟಿಸುತ್ತಿದ್ದಂತೆ ಬಿಗ್ ಬಿಗೆ ಅಭಿನಂದನೆ, ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ಭಾರತದಾದ್ಯಂತ ಸೆಲೆಬ್ರಿಟಿಗಳು ಹಿರಿಯ ನಟನಿಗೆ ಶುಭಾಶಯ ತಿಳಿಸುತ್ತಿದ್ದಾರೆ.


ಮೆಗಾಸ್ಟಾರ್ ರಜನಿಕಾಂತ್, ಪ್ರೀತಿಯ ಬಚ್ಚನ್ ಅವರಿಗೆ ಅಭಿನಂದನೆಗಳು, ಈ ಗೌರವಕ್ಕೆ ನೀವು ಅರ್ಹರು ಎಂದಿದ್ದಾರೆ. ಕರಣ್ ಜೋಹರ್ ಟ್ವೀಟ್ ಮಾಡಿ, ಭಾರತೀಯ ಸಿನಿಮಾರಂಗದ ಅತ್ಯಂತ ಸ್ಪೂರ್ತಿಯ ದಂತಕಥೆ, ಅವರು ಕೃತ್ರಿಮವಲ್ಲದ ರಾಕ್ ಸ್ಟಾರ್. ಅಮಿತಾಬ್ ಬಚ್ಚನ್ ಅವರ ಕಾಲದಲ್ಲಿ ಇರುವುದೇ ನನಗೆ ಹೆಮ್ಮೆ ಎಂದು ಬರೆದಿದ್ದಾರೆ.


ದಕ್ಷಿಣದ ಸೂಪರ್ ಸ್ಟಾರ್ ನಾಗಾರ್ಜುನ, ಗಾಯಕಿ ಆಶಾ ಬೋಸ್ಲೆ, ಅಮಿತಾಬ್ ಬಚ್ಚನ್ ಅವರ ಪುತ್ರ ಅಭಿಷೇಕ್ ಬಚ್ಚನ್ ಕೂಡ ಟ್ವೀಟ್ ಮಾಡಿದ್ದಾರೆ. 

SCROLL FOR NEXT